ಬೆಂಗಳೂರು: ಒಮ್ಮೆ ಪಾರ್ಟಿಯಿಂದ ತೆಗೆದು ಹಾಕಿದರೆ, ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳವುದಿಲ್ಲ, ಎಂದು ಶರತ್ ಬಚ್ಚೇಗೌಡಗೆ ಪರೋಕ್ಷವಾಗಿ ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಇಂದಿನ ಹೊಸಕೋಟೆ ಕಾರ್ಯಕ್ರಮಕ್ಕೆ ಬಚ್ಚೇಗೌಡ ಬರುವಂತೆ ಆಹ್ವಾನ ಕಳುಹಿಸಲಾಗಿತ್ತು, ಅವರು ಆ ಭಾಗದ ಸಂಸದರು. ಆ ಕಾರ್ಯಕ್ರಮಕ್ಕೆ ಬರ್ತಾರೆ. ಎಂಟಿಬಿ ನಾಗರಾಜ್ ನಮ್ಮ ಪಕ್ಷದವರಲ್ಲ, ಅವರು ಬೇರೆ ಪಕ್ಷದವರು. ಹೊಸಕೋಟೆಯಲ್ಲಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ ಇದರಲ್ಲಿ ರಾಜಕೀಯ ಬೇಡ ಎಂದು ಅಶೋಕ್ ಹೇಳಿದರು.
ಇದೇ ಸಂದರ್ಭದಲ್ಲಿ, ನಮ್ಮದು ಗಟ್ಟಿ ಸರ್ಕಾರ, ಸಿದ್ದರಾಮಯ್ಯ ಅವರ ಗೊಡ್ಡು ಬೆದರಿಕೆಗೆ ಹೆದರುವ, ಬೆದರುವ ಸರ್ಕಾರ ಅಲ್ಲ. ನಮ್ಮ ತಂಟೆಗೆ ಬರ್ಬೇಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮೂಲೆ ಗುಂಪಾಗಿದ್ದಾರೆ ಎಂದರು. ಟಿಪ್ಪು ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯಗೆ ಅಬ್ದುಲ್ ಸಿದ್ಧರಾಮಯ್ಯ ಆಗಬೇಡಿ ಎಂದು ವ್ಯಂಗ್ಯವಾಡಿದ್ದಾರೆ.