ಬೆಂಗಳೂರು: ಕೆಆರ್‌ಪುರಂರಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ ಎದುರಾಳಿನೇ ಇಲ್ಲ. ಬೈರತಿ ಬಸವರಾಜ್ 50-60 ಸಾವಿರ ಲೀಡ್‌ನಲ್ಲಿ ಜಯಶಾಲಿಯಾಗುತ್ತಾರೆ ಎಂದು ಕಂದಾಯ ಸಚಿವ ಹಾಗೂ ಕ್ಷೇತ್ರದ ಬಿಜೆಪಿ ಉಸ್ತುವಾರಿ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.
ರಾಮಮೂರ್ತಿ ನಗರದ ಕುವೆಂಪು ಮೈದಾನ ಬಳಿ ಪ್ರಚಾರ ಯಾತ್ರೆ ಆರಂಭಕ್ಕೂ ಮುನ್ನ ಮಾತನಾಡಿದ ಆರ್. ಅಶೋಕ್, ಕೆಆರ್‌ಪುರಂ ಕ್ಷೇತ್ರದಲ್ಲಿ ಬಿಜೆಪಿಗೆ ಎದುರಾಳಿಗಳೇ ಇಲ್ಲ. ಇಲ್ಲಿ ಒನ್ ಸೈಡ್ ಚುನಾವಣೆಯಾಗಿರುವುದರಿಂದ ಸುಲಭವಾಗಿ ನಮ್ಮ ಬಿಜೆಪಿ ಅಭ್ಯರ್ಥಿ ಬಸವರಾಜ್ ಅವರು ವಿಜಯ ಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅವರು ಗೂಂಡಾಗಿರಿ ಮಾಡಿಲ್ಲ. ಕಾಂಗ್ರೆಸ್ ಅವರು ಗುಂಡಾಗಿರಿ ಮಾಡೋರು. ಮೊದಲು ಅವರು ಗುಂಡಾಗಿರಿ ಮಾಡುತ್ತಿದ್ದರು. ಈಗ ಅವರು ಮಾಡೋಕೆ ಆಗುತ್ತಿಲ್ಲ ಎಂಬ ನೋವಿದೆ. ಬಿಜೆಪಿ ಯಾವತ್ತೂ ಬಲವಂತ ಹಾಗೂ ಒತ್ತಡ ಮಾಡಿಲ್ಲ. ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಬೇಕು. ಅಭಿವೃದ್ಧಿಗಾಗಿ ಬಿಜೆಪಿ ಬೇಕು ಅಂತಾ ಜನ ಹೇಳುತ್ತಿದ್ದಾರೆ. ಈಗಾಗಲೇ ಯಡಿಯೂರಪ್ಪ ಅವರು ಬೈರತಿ ಬಸವರಾಜ್ ಸಚಿವರಾಗ್ತಾರೆ ಅಂತಾ ಹೇಳಿದ್ದಾರೆ.
ಗೆದ್ದರೆ ಬೈರತಿ ಬಸವರಾಜ್ ಸಚಿವರಾಗುತ್ತಾರೆ. ಬೆಂಗಳೂರಿನ 4 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತೆ. ಬೆಂಗಳೂರು ಬಿಜೆಪಿ ಭದ್ರಕೋಟೆ ಆಗಲಿದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಜಗಳದಲ್ಲಿ ಸಮಯ ವ್ಯರ್ಥ ಮಾಡಿತು. ಅದಕ್ಕಾಗಿ ಜನರಿಗೆ ಬದಲಾವಣೆ ಬೇಕಿತ್ತು. ಹೀಗಾಗಿ ಯಡಿಯೂರಪ್ಪ ಸರ್ಕಾರ ಬಂದಿದೆ. 15 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.
ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇಲ್ಲ. ಕಾಂಗ್ರೆಸ್‌ನಲ್ಲಿ ಹತ್ತಾರು ಗ್ಯಾಂಗ್ ಆಗಿದೆ. ವೇಣುಗೋಪಾಲ್ ಇಲ್ಲಿಗೆ ಬಂದು ತೇಪೆ ಹಚ್ಚುವ ಕೆಲಸ ಮಾಡ್ತಿದ್ದಾರೆ. ಅವರು ತೇಪೆ ಹಚ್ಚುವ ಹೊತ್ತಿಗೆ ಎಲೆಕ್ಷನ್ ಮುಗಿದು ಹೋಗಿರುತ್ತೆ. ಜೆಡಿಎಸ್‌ಗೆ ಬೆಂಗಳೂರಿನಲ್ಲಿ ಅಸ್ತಿತ್ವ ಇಲ್ಲ. ಇನ್ನೂ ಪ್ರಚಾರಕ್ಕೆ ಅವರು ಇಳಿದಿಲ್ಲ ಎಂದು ಅಣಕವಾಡಿದರು.
ಸಚಿವ ಅಶೋಕ್ ಗೆಲ್ತೀವಿ ಅಂತಾ ಹಗಲು ಗನಸು ಕಾಣುತ್ತಿದ್ದಾರೆ ಎಂಬ ಮಾಜಿ ಸಚಿವ ಕೆ ಜೆ ಜಾರ್ಜ್ ಹೇಳಿಕೆಗೆ ತಿರುಗೇಟು ನೀಡಿದ ಆರ್. ಅಶೋಕ್, ನಾನಲ್ಲ, ಜಾರ್ಜ್ ಹಗಲು ಗನಸು ಕಾಣ್ತಿದ್ದಾರೆ. ಡಿಸೆಂಬರ್ 9 ರಂದು ಈ ಬಗ್ಗೆ ನೀವು ಮಾತಾಡಿ. ಜಾರ್ಜ್ ಹಗಲು ಗನಸು ನನಸಾಗುವುದಿಲ್ಲ ಎಂದರು.
ಕಾಂಗ್ರೆಸ್-ಜೆಡಿಎಸ್ ಒಪ್ಪಂದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರ ಕೊಟ್ಟಾಗ ಇಬ್ಬರೂ ಕಿತ್ತಾಡಿಕೊಂಡರು. ಈಗ ಇಬ್ಬರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಜನ ಇದಕ್ಕೆ ಛೀಮಾರಿ ಹಾಕ್ತಿದ್ದಾರೆ. ಸರ್ಕಾರ ಮಾಡಲು ಯೋಗ್ಯತೆ ಇಲ್ಲದವರು ಎಂದು ಛೀಮಾರಿ ಹಾಕ್ತಿದ್ದಾರೆ. ಎರಡು ಪಕ್ಷಗಳನ್ನು ಜನರು ಸೋಲಿಸ್ತಾರೆ ಎಂದು ಟೀಕಿಸಿದರು.