ಬೆಂಗಳೂರು: ನಿನ್ನೆ ದಾಳಿ ನಡೆಸಿದವರಿಗೆ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಮುಗಿಸುವ ಸಂಚಿತ್ತು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಭೇಟಿಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ನಿನ್ನೆಯ ದಾಳಿ ಸಂದರ್ಭ ಶ್ರೀನಿವಾಸಮೂರ್ತಿ ನಿವಾಸದ ಚಿನ್ನ, ಬೆಳ್ಳಿ, ಸೀರೆ ಎಲ್ಲದಕ್ಕೂ ಬೆಂಕಿ ಹಚ್ಚಿದ್ದಾರೆ. ಸಾಕಷ್ಟು ವಸ್ತುವನ್ನ ದೋಚಲಾಗಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯವೆಂದು ನನಗೆ ಅನ್ನಿಸುತ್ತೆ, ಶ್ರೀನಿವಾಸಮೂರ್ತಿ ಅವರೇ ಹೇಳಿದ ಪ್ರಕಾರ ಅವರನ್ನು ಮುಗಿಸಲೇಬೇಕು ಎಂದು ಬಂದಿದ್ದರು ಎಂದು ವಿವರಿಸಿದರು.
ಅಖಂಡ ಶ್ರೀನಿವಾಸಮೂರ್ತಿ 10 ವರ್ಷದಿಂದ ಪರಿಚಯ. ಬಹಳ ಸೌಮ್ಯ ಸ್ವಭಾವದವರು. ಯಾರ ತಂಟೆಗೂ ಹೋದವರು ಅಲ್ಲ. ನಾನು ಕೂಡ ರಾತ್ರಿ 3 ಗಂಟೆಗೆ ಅಲ್ಲಿಗೆ ಹೋಗಿದ್ದೆ. ಒಬ್ಬ ಶಾಸಕನಾಗಿ ಕೆಲಸ ನಿಭಾಯಿಸಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಸಮಾಜಘಾತುಕ ಶಕ್ತಿಗಳು ನಿನ್ನೆ ಮಾಡಿದ ಘಟನೆ ಏನು ಎಂಬುದು ತನಿಖೆಯಾಗಬೇಕು. 45 ಜನರನ್ನು ನಿನ್ನೆಯೇ ಬಂಧಿಸಿದ್ರು. ಬೆಂಗಳೂರನ್ನ ತಲ್ಲಣಗೊಳಿಸಬೇಕು ಎಂಬ ನಿಟ್ಟಿನಲ್ಲಿ ಘಟನೆ ನಡೆದಿರಬೇಕು. ಸರ್ಕಾರ ಇಂತಹ ಘಟನೆಯನ್ನು ಮಟ್ಟ ಹಾಕುತ್ತದೆ. ನಾನು ಸಿಎಂ ಅವರನ್ನು ಭೇಟಿಯಾಗುತ್ತೇನೆ. ನಾನು ಎರಡೂವರೆ ಗಂಟೆಗಳ ಕಾಲ ಅಲ್ಲಿಯೇ ಇದ್ದೇ. ಗಲಭೆಯ ಹಿನ್ನೆಲೆ ಅಖಂಡ ಶ್ರೀನಿವಾಸಮೂರ್ತಿ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದು, ಮಾತನಾಡಲು ಹಿಂಜರಿಯುತ್ತಿದ್ದಾರೆ. ನಾನು ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದು, ಇನ್ನಷ್ಟು ಮಾತುಕತೆ ನಡೆಸಿದ ನಂತರ ಮತ್ತಷ್ಟು ವಿವರ ನೀಡುತ್ತೇನೆ ಎಂದರು.
ನಿನ್ನೆಯ ಘಟನೆಯನ್ನು ನಿಯಂತ್ರಿಸಿದ ಪೊಲೀಸರಿಗೆ ನಾನು ಕೃತಜ್ಞತೆ ಹೇಳುತ್ತೇನೆ. ಘಟನೆ ನಡೆದ 4 ಗಂಟೆಯೊಳಗೆ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಮಚ್ಚು, ಕೊಡಲಿ, ಲಾಂಗ್, ಬಾಂಬ್ ಹೀಗೆ... ಎಲ್ಲವನ್ನೂ ಆರೋಪಿಗಳು ತಂದಿದ್ರು. ಪುಲಿಕೇಶಿನಗರ ಆದ್ಮೇಲೆ ಶಿವಾಜಿನಗರ ಕಡೆಗೂ ಹೋಗುವವರಿದ್ರು. ಇಡೀ ಬೆಂಗಳೂರನ್ನ ಬೆದರಿಸುವ ಗೂಂಡಾಗಳನ್ನು ಮಟ್ಟ ಹಾಕಬೇಕು. ನಾನು ಸಿಎಂ ಜೊತೆಗೆ ಬೆಳಿಗ್ಗೆ ಮಾತನಾಡುತ್ತೇನೆ. ನಾನು ಹೋದಾಗ ಇಡೀ ಅಂಗಡಿಯನ್ನೇ ಲೂಟಿ ಮಾಡಿದ್ರು. ಅವರು ಮಂಡ್ಯದವರು. ಎಸ್‌ಡಿಪಿಐ ಸೇರಿದಂತೆ ಹಲವರು ಅಲ್ಲಿ ಇದ್ರು.
ಇದೊಂದು ರೀತಿ ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿ, ಇಡೀ ಬೆಂಗಳೂರಿಗೆ ಬೆದರಿಕೆ ಕೊಡಲು ಮುಂದಾಗಿದ್ರು. ಸಿಎಂ ಸ್ಪಷ್ಟವಾದ ಮಾಹಿತಿ ಕೊಟ್ಟಿದ್ದಾರೆ. ನಾನು ಮತ್ತು ಗೃಹ ಸಚಿವರು ಈಗ ಸಿಎಂ ಅವರನ್ನು ಭೇಟಿಯಾಗುತ್ತೇವೆ. ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ತನಿಖೆ ಮಾಡಿಸುತ್ತೇವೆ. ನಾನು ಈಗಾಗಲೇ ಶಾಸಕರಾದ ಜಮೀರ್, ರಿಜ್ವಾನ್ ಅರ್ಷದ್ ಜೊತೆಗೂ ಮಾತನಾಡಿದ್ದೇನೆ. ನಾವು ನಿಜವಾಗಿಯೂ ಜನರ, ಜನಪ್ರತಿನಿಧಿಗಳ ರಕ್ಷಣೆ ಮಾಡುತ್ತೇವೆ. 24 ಗಂಟೆಯೊಳಗೆ ಅಪರಾಧಿಗಳು ಒಳಗೆ ಇರಬೇಕು. ಗಲ್ಲಿ ಗಲ್ಲಿಯಲ್ಲೂ ಅಪರಾಧಿಗಳನ್ನು ಹುಡುಕುತ್ತೇವೆ. ಅವರನ್ನು ಬಂಧಿಸುವವರೆಗೂ ಸರ್ಕಾರ ವಿಶ್ರಮಿಸುವುದಿಲ್ಲ ಎಂದರು.
ಪೊಲೀಸರು ಕರ್ತವ್ಯ ಮೆರೆದಿದ್ದಾರೆ:
ಗುಪ್ತಚರ ಇಲಾಖೆಯ ವೈಫಲ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೊಲೀಸರು ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಮೂರು ಗಂಟೆ ಪೊಲೀಸರು ಶಾಂತ ರೀತಿಯಲ್ಲಿ ಮಾತನಾಡಿದ್ದಾರೆ. ಆದ್ರೆ, ಅಲ್ಲಿ ಪೊಲೀಸರನ್ನೇ ಕೂಡಿ ಹಾಕುವ ನಿರ್ಧಾರಕ್ಕೆ ಬರುತ್ತಾರೆ ಅಂದ್ರೆ ಇವರು ದೇಶದ್ರೋಹಿಗಳು. ಡಿಸಿಪಿಯನ್ನು ಕೂಡಿ ಹಾಕುವ ಕೆಲಸಕ್ಕೆ ಕೈ ಹಾಕ್ತಾರೆ ಅಂದ್ರೆ, ಅವರು ದೇಶದ್ರೋಹಿಗಳು. ನಾವು ಬೆಂಗಳೂರಿನ ಜನರ ಪರವಾಗಿದ್ದೇವೆ. ನಿನ್ನೆ ಗಲಾಟೆ ಮಾಡಿದವರು ಯಾವುದೇ ಬಿಲದಲ್ಲಿ ಇದ್ರೂ, ಹೆಡೆಮುರಿ ಕಟ್ಟುತ್ತೇವೆ ಎಂದು ಅಶೋಕ್ ಭರವಸೆ ಇತ್ತರು. ಕೆಲಕಾಲ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಜೊತೆ ಅಶೋಕ್ ಚರ್ಚಿಸಿದರು.