ಬೆಂಗಳೂರು: ಬರ ಪರಿಹಾರಕ್ಕೆ ಹಣ ಇಲ್ಲ ಎನ್ನುವ ಸಿಎಂಗೆ ಸಲಹೆಗಾರರನ್ನು ನೇಮಿಸಲು ಸಾಕಷ್ಟು ಹಣ ಇದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಇಂದು ಬಸವರಾಜ ರಾಯರೆಡ್ಡಿ, ಬಿ.ಆರ್.ಪಾಟೀಲ್ ಹಾಗೂ ಆರ್.ವಿ.ದೇಶಪಾಂಡೆ ಅವರಿಗೆ ವಿಶೇಷ ಹುದ್ದೆ ನೀಡಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಎಕ್ಸ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ಅಶೋಕ್, ರೈತರಿಗೆ ಬರ ಪರಿಹಾರ ನೀಡಲು ಹಣ ಇಲ್ಲ ಅನ್ನುತ್ತಾರೆ. ಆದರೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಸಲಹೆಗಾರರು ಹಾಗೂ ರಾಜಕೀಯ ಕಾರ್ಯದರ್ಶಿಗಳನ್ನು ನೇಮಿಸಲು ಸಾಕಷ್ಟು ಹಣ ಅವರಲ್ಲಿದೆ ಎಂದಿದ್ದಾರೆ.
ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡಲು ಹೈಕಮಾಂಡ್‌ನಿಂದ ಹಸಿರು ನಿಶಾನೆ ಸಿಗದ ರಾಜ್ಯ ಕಾಂಗ್ರೆಸ್, ತಮ್ಮ ಅತೃಪ್ತ ಶಾಸಕರನ್ನು ತೃಪ್ತಿಪಡಿಸಲು ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದೆ ಎಂದು ಕುಟುಕಿದ್ದಾರೆ.
ಶಿಕ್ಷಣ ಸಚಿವರ ರಾಜೀನಾಮೆ ಪಡೆಯಿರಿ: ಸರ್ಕಾರಿ ಶಾಲೆ ಮಕ್ಕಳನ್ನು ಶೌಚ ಗುಂಡಿಗಿಳಿಸಿದಾಗ, ಓದುವ ಮಕ್ಕಳನ್ನು ಶೌಚಾಲಯ ಸ್ವಚ್ಚಗೊಳಿಸಲು ಬಳಸಿಕೊಂಡಾಗ, ಸಿಎಂ ಸಿದ್ದರಾಮಯ್ಯನವರು ಹಿಜಾಬ್ ವಿಷಯ ತೇಲಿಬಿಟ್ಟು ತಮಾಷೆ ನೋಡುತ್ತಿದ್ದಾಗ ನಾಪತ್ತೆಯಾಗಿದ್ದ ಶಿಕ್ಷಣ ಸಚಿವರು, ಈಗ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಕಾಣಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿಗಳು ಈ ಕೂಡಲೇ ಶಿಕ್ಷಣ ಸಚಿವರ ರಾಜೀನಾಮೆ ಪಡೆದುಕೊಂಡು ಅರ್ಹರಿಗೆ ಶಿಕ್ಷಣ ಇಲಾಖೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮಧು ಬಂಗಾರಪ್ಪ ಚೆಕ್ಬೌನ್ಸ್ ಪ್ರಕರಣ: ಚೆಕ್ಬೌನ್ಸ್ ಪ್ರಕರಣದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ದಂಡ ಪಾವತಿಸದಿದ್ದರೆ ಜೈಲು ಶಿಕ್ಷೆ ವಿಧಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶಿಸಿದೆ. ಆಕಾಶ್ ಆಡಿಯೋ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವೇಳೆ ಮಧು ಬಂಗಾರಪ್ಪನವರು ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆಗೆ 6.60 ಕೋಟಿ ರೂ ಬಾಕಿ ಪಾವತಿಗೆ ಚೆಕ್ ನೀಡಿದ್ದರು. 2011ರಲ್ಲಿ ನೀಡಿದ್ದ ಈ ಚೆಕ್ ಬೌನ್ಸ್ ಆಗಿತ್ತು. ಇದರ ಬೆನ್ನಲ್ಲೇ ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆಯು 6.60 ಕೋಟಿ ರೂ. ಚೆಕ್ಬೌನ್ಸ್ ಪ್ರಕರಣ ದಾಖಲಿಸಿತ್ತು. ಇದೀಗ ಚೆಕ್ ಮೊತ್ತ ಸೇರಿ ಆರು ಕೋಟಿ 96 ಲಕ್ಷದ 70 ಸಾವಿರ ರೂ. ಮೊತ್ತ ಪಾವತಿಸಬೇಕು ಎಂದು ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: ಚೆಕ್ಬೌನ್ಸ್: ಮಧು ಬಂಗಾರಪ್ಪ ದಂಡ ಪಾವತಿಸದಿದ್ದರೆ 6 ತಿಂಗಳು ಜೈಲು ಶಿಕ್ಷೆಗೆ ಆದೇಶ