ಬೆಂಗಳೂರು: ಒಕ್ಕಲಿಗ ಹಾಗು ಪಂಚಮಸಾಲಿ ಸಮುದಾಯದವರ ಮೀಸಲಾತಿ ಸಂಬಂಧಿಸಿ ನಿನ್ನೆ ಚರ್ಚೆಯಾಗಿ ಸ್ಪಷ್ಟ ತೀರ್ಮಾನಕ್ಕೆ ಬರಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಜಯ ಮೃತ್ಯುಂಜಯ ಸ್ವಾಮೀಜಿ ಜೊತೆ ಮಾತನಾಡಿದ್ದೇವೆ. ಮೀಸಲಾತಿ ಎಷ್ಟು ಪ್ರಮಾಣ ಎಂಬ ಬಗ್ಗೆ ಸ್ವಾಮೀಜಿಗಳ ಬಳಿ ಮಾತನಾಡಿದ್ದೇವೆ ಎಂದರು.
ಅಲ್ಲದೇ ಈಗಿರುವ ಮೀಸಲಾತಿ ಹಾಗೆಯೇ ಇರುತ್ತದೆ. ಯಾರೂ ಸಂಶಯ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು 2ಸಿ ಮತ್ತು 2ಡಿಯಲ್ಲಿ ಬರುವ ಸಮುದಾದ ಜನರಿಗೆ ಶಿಕ್ಷಣ ಮತ್ತು ಔದ್ಯೋಗಿಕ ಮೀಸಲಾತಿ ಸಿಗಲಿದೆ. ಯಾರಿಗೂ ತೊಂದರೆ ಮಾಡದೇ 2ಸಿ ಮತ್ತು 2ಡಿ ಸೇರ್ಪಡೆಗೆ ಸಂಪುಟ ಒಪ್ಪಿದೆ. ಇದು ಸ್ಪಷ್ಟವಾಗಿ ಜನರಿಗೆ ತಿಳಿಯಬೇಕು. ಇದರ ಜೊತೆಗೆ, ಅಡ್ವೊಕೇಟ್ ಜನರಲ್ ಹಾಗೂ ಕಾನೂನು ಸಚಿವರ ಜೊತೆ ಚರ್ಚೆಯಾಗಿದೆ. ಕಾನೂನು ತೊಡಕು ಬಾರದಂತೆ ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ ಎಂದರು.
2ಸಿ ಮತ್ತು 2ಡಿ ಪ್ರವರ್ಗ: ವರ್ಷಗಳಿಂದ ಪಂಚಮಸಾಲಿ ಹಾಗೂ ಒಕ್ಕಲಿಗ ಮೀಸಲಾತಿಗೆ ಆ ಸಮುದಾಯುದವರು ಬೇಡಿಕೆ ಇಟ್ಟಿದ್ದರು. ಇದೀಗ ರಾಜ್ಯ ಬಿಜೆಪಿ ಸರ್ಕಾರ ಸಚಿವ ಸಂಪುಟ ಸಭೆ ನಡೆಸಿ ಎರಡು ಸಮುದಾಯದವರಿಗೆ 2C ಮತ್ತು 2D ಎಂಬ ಪ್ರವರ್ಗದಲ್ಲಿ ಮೀಸಲಾತಿ ನೀಡಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ಎಂಬುದು ಇನ್ನು ವರದಿ ಬಂದ ಬಳಿಕ ತಿಳಿದುಬರಬೇಕಷ್ಟೇ.
ಪ್ರವರ್ಗ 3ಎ ಒಕ್ಕಲಿಗ ಸಮುದಾಯಕ್ಕೆ ಇರುವ ಮೀಸಲಾತಿ ಪ್ರಮಾಣ ಶೇಕಡಾ 4 ರಿಂದ ಶೇ 12ಕ್ಕೆ ಹೆಚ್ಚಿಸಬೇಕೆಂದು ಒಕ್ಕಲಿಗ ಸಮುದಾಯ ಬೇಡಿಕೆ ಇಟ್ಟಿತ್ತು. ಹೀಗಾಗಿ ಸರ್ಕಾರ ಈ ಸಮುದಾಯಕ್ಕಾಗಿ ಹೊಸ ಪ್ರವರ್ಗವನ್ನೇ ಸೃಷ್ಟಿಸಿದೆ. ಅದುವೇ ಪ್ರವರ್ಗ 2ಸಿ. EWC ಮೀಸಲಾತಿಯಿಂದ ಶೇಕಡಾ 3 ರಷ್ಟನ್ನು ಮರು ಹಂಚಿಕೆ ಮಾಡಿ ಹೊಸ ಪ್ರವರ್ಗಕ್ಕೆ ಮೀಸಲಾತಿ ಪ್ರಮಾಣವನ್ನು ಶೇ 7ಕ್ಕೆ ಹೆಚ್ಚಿಸಲು ಚರ್ಚೆ ನಡೆದಿದೆ.
ಲಿಂಗಾಯತ ಪಂಚಮಸಾಲಿ ಸಮುದಾಯ, 3B ಪ್ರವರ್ಗವು ತಮಗೆ ಪ್ರವರ್ಗ 2ಎ ಬೇಕೆಂದು ಪಟ್ಟು ಹಿಡಿದಿತ್ತು. ಮೊದಲು ಈ ವರ್ಗಕ್ಕೆ ಶೇ 5ರಷ್ಟು ಮೀಸಲಾತಿಯಿತ್ತು. ಪ್ರಸ್ತುತ ಇವರಿಗೆ ಪ್ರತ್ಯೇಕ ಪ್ರವರ್ಗ 2ಡಿ ರಚನೆಯಾಗಿದ್ದು, EWC ಮೀಸಲಾತಿಯಿಂದ ಶೇಕಡ 4 ರಷ್ಟನ್ನು 2ಡಿಗೆ ಮರು ಹಂಚಿಕೆ ಮಾಡಲು ಚಿಂತನೆ ನಡೆದಿದೆ.