ಬೆಂಗಳೂರು: ಕರ್ನಾಟಕ ವಿಧಾನಸಭೆ ಉಪಚುನಾವಣೆಯ ಬಳಿಕ ಸಿಎಂ ಯಡಿಯೂರಪ್ಪಗೆ ಕಂಟಕ ಇರುವುದಲ್ಲ. ಕಂಟಕ ಇರುವುದು ಸಿದ್ದರಾಮಯ್ಯರಿಗೆ ಎಂದು ಸಚಿವ ಆರ್.ಅಶೋಕ್ ಭವಿಷ್ಯ ನುಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿಯೇ ಅವರಿಗೆ ವಿರೋಧಿಗಳಿದ್ದಾರೆ. ಚುನಾವಣಾ ಫಲಿತಾಂಶದ ನಂತರ ಅವರನ್ನು ಪ್ರತಿಪಕ್ಷ ಸ್ಥಾನದಿಂದ ಕೆಳಗಿಳಿಸಲು ಕಾಯುತ್ತಿದ್ದಾರೆ ಎಂದರು.
ಮುಂದೆ ನಾನೇ ಸಿಎಂ ಎಂದು ಹೇಳುತ್ತಾ ಸಿದ್ದರಾಮಯ್ಯ ತಿರುಗಾಡುತ್ತಿದ್ದಾರೆ. ಕುಮಾರಸ್ವಾಮಿ, ಪರಮೇಶ್ವರ್ ಹಾಗೂ ಡಿಕೆಶಿಯನ್ನು ದೂರವಿಡಲು ಇದೊಂದು ಸ್ಕೀಮ್ ಎಂದರು. ಅವರ ಬೆನ್ನ ಹಿಂದೆಯೇ ಬಹಳಷ್ಟು ಮಂದಿ ಅವರಿಗೆ ವಿರೋಧಿಗಳಿದ್ದಾರೆ ಎಂದರು.
ಯುದ್ಧಕ್ಕೆ ಮೊದಲೇ ಶಸ್ತ್ರ ಕೆಳಗಿಟ್ಟ 'ಕೈ' ಪಡೆ
ಇನ್ನು ಇದೇ ವೇಳೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಯುದ್ಧಕ್ಕೆ ಮೊದಲೇ ಕಾಂಗ್ರೆಸ್ ಶಸ್ತ್ರ ಕೆಳಗಿಟ್ಟಿದೆ ಎಂದರು. ಕಾಂಗ್ರೆಸ್ನ ಹಿರಿಯ ನಾಯಕರಲ್ಲಿ ಹೊಂದಾಣಿಕೆಯಿಲ್ಲ. ಯಾವ ಕೈ ನಾಯಕರೂ ಕೂಡ ಉಪ ಚುನಾವಣೆ ಸಂಬಂಧ ರಾಜ್ಯದಲ್ಲಿ ಪ್ರವಾಸ ಮಾಡುತ್ತಿಲ್ಲ ಎಂದರು. ಹೆಚ್.ಕೆ. ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಪರಮೇಶ್ವರ್ ಅವರೆಲ್ಲಾ ಎಲ್ಲಿ ಇದ್ದಾರೆ ಎಂದು ಪ್ರಶ್ನಿಸಿದರು. ಅವರು ಯಾರೂ ಕೂಡ ರಾಜ್ಯದಲ್ಲಿ ಓಡಾಡುತ್ತಿಲ್ಲ ಎಂದರು.
ಸಿದ್ದರಾಮಯ್ಯ ಅವರದ್ದು ಏಕಪಕ್ಷೀಯ ನಿರ್ಧಾರವಾಗಿದ್ದು. ಅವರು ಏಕಾಂಗಿಯಾಗಿಯೇ ಓಡಾಡುತ್ತಿದ್ದಾರೆ. ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯ ಸಿದ್ದರಾಮಯ್ಯ ಆಗಿದ್ದಾರೆ ಎಂದು ಲೇವಡಿ ಮಾಡಿದರು. ಇನ್ನು ಹೆಚ್ಡಿಕೆ ಹತಾಶರಾಗಿದ್ದು, ಅವರು ನಿಂತ ನೆಲ ಕುಸಿತಾ ಇದೆ. ಚುನಾವಣೆ ಬಂದಾಗ ಅವರಿಗೆ ಕಣ್ಣೀರು ಬರುತ್ತದೆ, ಅವರ ಈ ಹತಾಶೆಯ ಕಣ್ಣೀರಿಗೆ ರಾಜ್ಯದ ಜನರು ಕನಿಕರ ಪಡಲ್ಲ ಎಂದರು.