ಬೆಂಗಳೂರು: ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಮಹನೀಯರನ್ನು ಸ್ಮರಿಸುವ ಸಲುವಾಗಿ ಕಾಂಗ್ರೆಸ್ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಗರದ ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೆರವೇರಿಸಿದರು.
ಇದಾದ ನಂತರ ಕಾಂಗ್ರೆಸ್ ಭವನದಿಂದ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿವರೆಗೆ ನಡೆದ ಧ್ವಜ ಪಥ ಸಂಚಲನ ಜಾಥಾಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸೇವಾದಳದ ಅಧ್ಯಕ್ಷೆ ಪ್ಯಾರಿಜಾನ್, ಕರ್ನಾಟಕ ಉಸ್ತುವಾರಿಗಳಾದ ಬಲರಾಂ ಸಿಂಗ್ ಬದೋರಿಯಾ, ಸೇವಾದಳದ ದಕ್ಷಿಣ ಉಸ್ತುವಾರಿ ರೇಣುಕಾ ಪ್ರಸಾದ್, ಕಾರ್ಯಾಧ್ಯಕ್ಷರಾದ ಕಿರಣ್ ಮೊರಾಸ್, ತುಳಸಿಗಿರಿ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ವಿ.ಎಸ್. ಆರಾಧ್ಯ, ಸೇವಾದಳದ ಯಂಗ್ ಬ್ರಿಗೇಡ್ ಅಧ್ಯಕ್ಷ ಜುನೈದ್ ಪಿಕೆ ಮತ್ತಿತರರು ಉಪಸ್ಥಿತರಿದ್ದರು.
ಕ್ವಿಟ್ ಇಂಡಿಯಾ ಚಳುವಳಿಯನ್ನು ಸಂಕೇತಿಸುವ ಚರಕ ಒಳಗೊಂಡ ಧ್ವಜವನ್ನು ಸೇವಾದಳ ಅಧ್ಯಕ್ಷೆ ಪ್ಯಾರಿಜಾನ್ಗೆ ಸಲೀಂ ಅಹಮದ್ ಹಸ್ತಾಂತರಿಸಿದ ನಂತರ ಕಾಂಗ್ರೆಸ್ ಧ್ವಜ ಹಾಗೂ ಕ್ವಿಟ್ ಇಂಡಿಯಾ ಧ್ವಜವನ್ನು ಹಿಡಿದು ಕಾಂಗ್ರೆಸ್ ಮುಖಂಡರು ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿವರೆಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ತೆರಳಿದರು.
ಇದಕ್ಕೂ ಮುನ್ನ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಮಹಾನ್ ಆಚರಣೆಯ ಮಹತ್ವ, ಹೋರಾಟದ ಅರಿವು, ತ್ಯಾಗ ಇಂದಿನ ಯುವ ಪೀಳಿಗೆಗೆ ತಿಳಿದಿಲ್ಲ. ಕ್ವಿಟ್ ಇಂಡಿಯಾ ಚಳುವಳಿಯ ಕುರಿತಾದ ಅರಿವಿಲ್ಲ. ಯುವ ಪೀಳಿಗೆಯನ್ನು ದಿಕ್ಕು ತಪ್ಪಿಸುವ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಮಾಡುತ್ತಿವೆ. ಇದರಿಂದ ರಸ್ತೆಯಲ್ಲಿ ಮೆರವಣಿಗೆ ಸಾಗುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಯತ್ನ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ: ದೇಶದ ಯುವಶಕ್ತಿಗೆ ಚೈತನ್ಯ ತುಂಬಿದ ಚಳುವಳಿ ಕ್ವಿಟ್ ಇಂಡಿಯಾ: ಪ್ರಧಾನಿ ಮೋದಿ ಬಣ್ಣನೆ
ಇಂದು ಮೆರವಣಿಗೆ ಕೆಪಿಸಿಸಿ ಕಚೇರಿ ತಲುಪಿ ಅಲ್ಲಿ ಸಮಾವೇಶಗೊಳ್ಳಲಿದೆ. ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಎಸ್.ಆರ್ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಎಐಸಿಸಿ ಪದಾಧಿಕಾರಿಗಳು, ಸಂಸದರು, ಶಾಸಕರು ಹಾಗೂ ಪಕ್ಷದ ಹಿರಿಯ ನಾಯಕರುಗಳು ಭಾಗವಹಿಸಲಿದ್ದಾರೆ.