ಬೆಂಗಳೂರು: ರಾಜ್ಯಪಾಲರಿಗೆ ಸ್ಪೀಕರ್ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ದೂರು ನೀಡಿರುವ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯರು, ಪ್ರತಿಪಕ್ಷದವರು ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಸದನ ನಡೆಸಬಾರದು ಎಂದು ಪ್ರತಿಪಕ್ಷದ ಸದಸ್ಯರ ವಿರುದ್ಧ ಸದನದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭೆ ಕಲಾಪ ಇಂದು ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರಿಸಿದ್ದರು. ಈ ಮಧ್ಯೆ ಕಲಾಪ ಆರಂಭದಲ್ಲೇ ಕಾಂಗ್ರೆಸ್ ವಿರುದ್ಧ ಬಿಜೆಪಿ ಶಾಸಕ ಕೆ.ಜೆ. ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಸಭಾಧ್ಯಕ್ಷರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ಹೋಗಿದ್ದಾರೆ. ಪ್ರತಿಪಕ್ಷದ ಸದಸ್ಯರು ಸ್ಪೀಕರ್ ಬಳಿ ಕ್ಷಮೆ ಕೇಳಬೇಕು ಎಂದು ಕೆ.ಜೆ. ಬೋಪಯ್ಯ ಒತ್ತಾಯಿಸಿದರು. ಇದಕ್ಕೆ ಕೆ.ಎಸ್. ಈಶ್ವರಪ್ಪ, ಅರಗ ಜ್ಞಾನೇಂದ್ರ, ಬಸವರಾಜ ಬೊಮ್ಮಾಯಿ ಧ್ವನಿ ಗೂಡಿಸಿದರು.
ಕಾಂಗ್ರೆಸ್ನವರು ಸ್ಪೀಕರ್ ವಿರುದ್ಧ ಇಂದು ದೂರು ಕೊಟ್ಟಿದ್ದಾರೆ. ಸ್ಪೀಕರ್ ಏನು ತಪ್ಪು ಮಾಡಿದಾರೆ ಅಂತ ದೂರು ಕೊಟ್ಟಿದ್ದಾರೆ. ಆ ಮೂಲಕ ಸಂವಿಧಾನ ಪೀಠಕ್ಕೆ ಕಾಂಗ್ರೆಸ್ ನಾಯಕರು ಅಗೌರವ ತೋರಿಸಿದ್ದಾರೆ. ಕಾಂಗ್ರೆಸ್ ದೂರು ವಿರುದ್ಧ ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿ, ಕಾಂಗ್ರೆಸ್ ನವರು ಸ್ಪೀಕರ್ ಬಳಿ ಕ್ಷಮೆ ಕೇಳಬೇಕು ಆಗ್ರಹಿಸಿದರು. ಈ ವೇಳೆ ರಾಜ್ಯಪಾಲರಿಗೆ ನೀಡಿದ ದೂರಿನ ಬಗ್ಗೆ ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ್ ಖರ್ಗೆ, ಎನ್.ಎ. ಹ್ಯಾರೀಸ್ ಸಮರ್ಥನೆಗೆ ಮುಂದಾದರು. ಆಗ ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಯಿತು. ಈ ವೇಳೆ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿ, ರಾಜ್ಯಪಾಲರು ಮೂರು ಸಲ ಬಹುಮತಕ್ಕೆ ಆದೇಶಿಸಿದ್ದರು. ಆಗ ರಾಜ್ಯಪಾಲರಿಗೆ ಕಾಂಗ್ರೆಸ್ ಗೌರವ ಕೊಡಲಿಲ್ಲ. ಇವತ್ತು ಇವರಿಗೆ ರಾಜ್ಯಪಾಲರು ನೆನಪಾದ್ರಾ?. ಆವತ್ತು ಬೇಡವಾದ ರಾಜ್ಯಪಾಲರು ಇವತ್ತು ಬೇಕಾಯ್ತಾ?. ನಾಚಿಕೆ ಆಗಬೇಕು ಕಾಂಗ್ರೆಸ್ಸಿನ ನವರಿಗೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಗದ್ದಲ, ಧರಣಿ ನಡುವೆಯೇ ಸಂವಿಧಾನ ಕುರಿತು ವಿಶೇಷ ಚರ್ಚೆ ಆರಂಭವಾಯಿತು. ಸಂವಿಧಾನ ಕುರಿತು ಮಾಧುಸ್ವಾಮಿ ಚರ್ಚೆ ಆರಂಭಿಸಿದಾಗ, ಈ ಮಧ್ಯೆ ಕಾಂಗ್ರೆಸ್ ಸದಸ್ಯರು ಧಿಕ್ಕಾರದ ಘೋಷಣೆ ಕೂಗಿದರು. ಆಗ ಪ್ರತಿಪಕ್ಷದ ಶಾಸಕರು, ಆಡಳಿತ ಪಕ್ಷದ ನಾಯಕರ ನಡುವೆ ವಾಗ್ವಾದ ನಡೆಯಿತು. ಸಂವಿಧಾನ ಕುರಿತು ಮಾಧುಸ್ವಾಮಿ ಚರ್ಚೆ ಆರಂಭಿಸಿದಾಗ, ಕಾಂಗ್ರೆಸ್ ಸದಸ್ಯರು ಅಡ್ಡಿಪಡಿಸಿ ಘೋಷಣೆಗಳನ್ನು ಕೂಗಿದರು.
ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ನೋಟಿಸ್ ಕೊಡದೆ ಸದನದ ಸದಸ್ಯರೊಬ್ಬರನ್ನು ಹೊರಹಾಕಿ ಎಂದು ಒತ್ತಾಯಿಸುವುದು ಈ ಸದನದ ಇತಿಹಾಸದಲ್ಲೇ ಆಗಿಲ್ಲ. ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ಸಭಾಧ್ಯಕ್ಷರ ವಿರುದ್ಧವೇ ದೂರುಕೊಡುತ್ತಾರೆ ಎಂದರೆ ಏನರ್ಥ ಎಂದು ಕಿಡಿಕಾರಿದರು.
ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸದನದಲ್ಲಿ ಸಭಾಧ್ಯಕ್ಷರ ತೀರ್ಮಾನವೇ ಅಂತಿಮ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಜನ ಸಾಮಾನ್ಯರಿಗೆ ಸಂಬಂಧವೇ ಪಡದ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚಿಸುವುದೇ ತಪ್ಪು. ಅದಕ್ಕೆ ಅವಕಾಶಕೊಡಲಿಲ್ಲ ಎಂದು ರಾಜ್ಯಪಾಲರಿಗೆ ದೂರುಕೊಡುವುದು ಅಕ್ಷಮ್ಯ. ಅವರು ಕ್ಷಮೆ ಕೇಳಲೇಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಶಾಸಕರ ಸಮರ್ಥನೆಗೆ ಏಕಾಂಗಿ ಪ್ರಯತ್ನ ನಡೆಸಿದ ಮಾಜಿ ಉಪಸಭಾಧ್ಯಕ್ಷ ಶಿವಶಂಕರರೆಡ್ಡಿ. ನಾವು ಎರಡು ದಿನಗಳಿಂದ ಚರ್ಚೆಗೆ ಅವಕಾಶ ಕೇಳುತ್ತಲೇ ಇದ್ದೆವು. ಆದರೆ ನೀವು ಅವಕಾಶ ಕೊಡಲಿಲ್ಲ. ಹಾಗಾಗಿ ನಾವು ರಾಜ್ಯಪಾಲರ ಬಳಿಗೆ ಹೋಗದೆ ಮತ್ತೇನು ಮಾಡಬೇಕು ಎಂದರು. ಶಾಸಕ ಅರಗಜ್ಞಾನೇಂದ್ರ ಮಾತನಾಡಿ, ಎಲ್ಲೋ ರಸ್ತೆ ಮೇಲೆ ನಡೆದ ಘಟನೆಗೆ ಇಲ್ಲಿ ಚರ್ಚೆ ಮಾಡಬೇಕು. ಸದನದ ಕಲಾಪಗಳನ್ನು ನಿಲ್ಲಿಸುತ್ತಾರೆ ಎಂದರೆ ಏನರ್ಥ. ಇದು ಸದನಕ್ಕೆ ಮಾಡಿರುವ ಅಪಮಾನ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರ ಮಾತನಾಡಲು ಪ್ರಯತ್ನಿಸಿದ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯಕ ವಿರುದ್ದ ಗರಂ ಆದ ಸ್ಪೀಕರ್, ನಿಮ್ಮನ್ನು ಮಾತನಾಡಲು ಕರೆದಿಲ್ಲ. ಕರೆದಿರುವುದು ಮಾಧುಸ್ವಾಮಿಯವರನ್ನು. ಅವರು ಮಾತನಾಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು. ಸ್ವಲ್ಪ ತಡವಾಗಿ ಆಗಮಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನಾವು ಕಾಂಗ್ರೆಸ್ ಶಾಸಕರ ನಿಯೋಗ ರಾಜ್ಯಪಾಲರ ಬಳಿಗೆ ಹೋಗಿದ್ದೆವು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಮೂಲಕ ಸಂವಿಧಾನದ ಉಲ್ಲಂಘನೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಪೀಕರ್ ಗೆ ನಿರ್ದೇಶನ ನೀಡುವಂತೆ ಕೋರಿದ್ದೇವೆ. ಸದನದಲ್ಲಿ ಚರ್ಚೆ ಮಾಡಲು ಸ್ಪೀಕರ್ ಅವಕಾಶ ಕೊಟ್ಟಿಲ್ಲ. ಆದರೂ ನಾಳೆ ಬಜೆಟ್ ಮಂಡನೆಯಾಗುತ್ತಿದೆ. ಈ ಹಂತದಲ್ಲಿ ಅನಗತ್ಯವಾಗಿ ಧರಣಿ ಮಾಡಿದರೆ ಕರ್ತವ್ಯ ಲೋಪಮಾಡಿದಂತೆ ಆಗುತ್ತದೆ. ಹಾಗಾಗಿ ನಾವು ಧರಣಿ ವಾಪಸ್ ಪಡೆದು ಕಲಾಪದಲ್ಲಿ ಭಾಗಿಯಾಗುತ್ತೇವೆ ಎಂದರು.
ಸ್ವಾಗತಿಸಿದ ಸ್ಪೀಕರ್ :
ಇದಕ್ಕೆ ಸ್ಪೀಕರ್ ಕಾಗೇರಿ, ಪ್ರತಿಪಕ್ಷ ನಾಯಕರನ್ನು ಅಭಿನಂದಿಸುತ್ತೇನೆ. ನಮ್ಮಲ್ಲಿ ಅಭಿಪ್ರಾಯ ಬೇಧ ಸಹಜ. ಆದರೆ ನಾವು ರಾಜ್ಯದ ಜನರನ್ನು ಪ್ರತಿನಿಧಿಸುವವರು. ಜನರ ಸಮಸ್ಯೆಗಳ ಬಗ್ಗೆ ಇಲ್ಲಿ ಚರ್ಚೆಯಾಗಬೇಕು. ಅದಕ್ಕೆ ಸೂಕ್ತವಾದ ವೇದಿಕೆ ಇದು. ಸಂವಿಧಾನದ ಮೇಲಿನ ಚರ್ಚೆಯಲ್ಲೂ ನೀವು ಭಾಗಿಯಾಗಬೇಕು. ಸಂವಿಧಾನದ ಮೇಲೆ ಹೆಚ್ಚು ಗೌರವ ಮೂಡುವ ವಾತಾವರಣ ನಿರ್ಮಾಣವಾಗಬೇಕು. ಧರಣಿ ವಾಪಸ್ ಪಡೆದು, ಸಂವಿಧಾನದ ಚರ್ಚೆಯಲ್ಲಿ ಭಾಗವಹಿಸುವ ನಿಮ್ಮ ನಿರ್ಧಾರ ಸ್ವಾಗತಾರ್ಹ ಎಂದು ಹೇಳಿದರು. ಸದನದಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದ ಧರಣಿ ವಾಪಸ್ ಪಡೆದರು. ನಂತರ ಸಂವಿಧಾನ ಕುರಿತು ಚರ್ಚೆ ಮುಂದುವರಿಸಲಾಯಿತು.