ಬೆಂಗಳೂರು: 10 ಲಕ್ಷ ಹಣವನ್ನು ವಿರೋಧ ಪಕ್ಷ ನಾಯಕರಿಗೆ ಕೊಡೋಕೆ ಹೋಗಿರಬಹುದು ಅಂತ ನಾನು ಹೇಳಬಹುದಲ್ವಾ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ತಿರುಗೇಟು ನೀಡಿದರು. ವಿಕಾಸಸೌಧದಲ್ಲಿ ಸುದ್ದಿಗೊಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಕಾಸಸೌಧದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರ ಬಳಿ 10 ಲಕ್ಷ ರೂಪಾಯಿ ಸಿಕ್ಕ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು ಯಾಕೆ ಆ ಜವಾಬ್ದಾರಿ ಹೊತ್ತಿಕೊಳ್ಳಬೇಕು ಎಂದರು.
ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ತಿರುಗೇಟು ನೀಡುತ್ತಾ, ವಿರೋಧ ಪಕ್ಷ ನಾಯಕರಿಗೆ ಹಣ ಕೊಡಲು ಬಂದಿರಬಹುದು ಅಂತ ನಾನು ಹೇಳ ಬಹುದಾ?. ಹಣ ಕೊಡಲು ವಿಕಾಸಸೌಧ ಅಥಾವ ವಿಧಾನಸೌಧಕ್ಕೆ ಯಾಕೆ ಬರಬೇಕು. ಮನೆ ಅಥಾವ ಬೇರೆ ಕಡೆ ಎಲ್ಲಾದರೂ ಕೊಡಬಹುದು ಅಲ್ವಾ?. ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ. ನಾನು ಈ ಪ್ರಕರಣದಲ್ಲಿ ಯಾರ ಮೇಲೂ ಒತ್ತಡ ಹಾಕಿಲ್ಲ. ನಮಗೂ ಆತನಿಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ವಿಚಾರಣೆ ನಡೆಯುತ್ತಿದೆ,ಕ್ರಮ ಕೈಗೊಳ್ಳಲಾಗುತ್ತೆ: ಹಣ ಕೊಡೋದು ಇದ್ದಿದ್ದರೆ ಆತ ವಿಧಾನಸೌಧಕ್ಕೇ ಬರಬೇಕಿತ್ತಾ ಎಂದು ನಿನ್ನೆಯೇ ಅಂದಿದ್ದೆ. ನಮಗೂ ಆತನಿಗೂ ಸಂಬಂಧ ಇಲ್ಲ. ಆತನನ್ನು ಬಂಧಿಸಲಾಗಿದೆ, ವಿಚಾರಣೆ ನಡೆಯುತ್ತಿದೆ. ಆತ ಆ ಹಣಕ್ಕೆ ಸೂಕ್ತ ದಾಖಲಾತಿ ಕೊಡದಿದ್ದರೆ ಕ್ರಮ ಆಗಲಿದೆ. ನಾನು ಇದರ ಹೊಣೆ ಯಾಕೆ ಹೊತ್ತುಕೊಳ್ಳಲಿ?. ನಾನು ಪ್ರಕರಣದಲ್ಲಿ ಯಾರ ಮೇಲೂ ಒತ್ತಡ ಹಾಕಿಲ್ಲ. 24 ಗಂಟೆ ಕಸ್ಟಡಿಯಲ್ಲಿದ್ದರೆ ಆಟೋಮ್ಯಾಟಿಕ್ ಆಗಿ ಅಧಿಕಾರಿ ಸಸ್ಪೆಂಡ್ ಆಗುತ್ತಾರೆ. ದುಡ್ಡು ಸಿಕ್ಕಿದ್ದು ವಿಧಾನಸೌಧದ ಕ್ಯಾಂಪಸ್ ಹೊರಗೆ. ನಾನು ವಿಕಾಸಸೌಧದಲ್ಲಿ ಇದ್ದಿದ್ದು, ಹಣ ಸಿಕ್ಕಿದ್ದು ಒಂದೇ ಸಮಯ ಅಂತಾದರೆ ನಾನು ವಿಧಾನಸೌಧಕ್ಕೆ ಬರಲೇ ಬಾರದಾ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ದುಡ್ಡು ಸಿಕ್ಕಿದ್ದು ಹೊರಗೆ, ಯಾರೋ ದುಡ್ಡು ಹಿಡಿದುಕೊಂಡು ಹೋಗುತ್ತಿದ್ದಕ್ಕೂ ನಾನು ಪ್ರೆಸ್ ಮೀಟ್ ಮಾಡಿದ್ದಕ್ಕೂ ಏನು ಸಂಬಂಧ?. ಚುನಾವಣಾ ಪ್ರಚಾರಕ್ಕೆ ಹೇಳಿಕೆ ಕೊಡುತ್ತಿದ್ದಾರೆ ಅಷ್ಟೇ ಎಂದು ತಿಳಿಸಿದರು. ಸ್ಯಾಂಟ್ರೋ ರವಿ ಯಾರು ಅಂತ ನನಗೆ ಗೊತ್ತಿಲ್ಲ. ನಿನ್ನೆಯಷ್ಟೇ ಅವರ ಹೆಸರನ್ನು ನಾನು ಕೇಳಿದ್ದು. ಕೆಕೆ ಗೆಸ್ಟ್ ಹೌಸ್ ಡಿಪಿಆರ್ ವ್ಯಾಪ್ತಿಗೆ ಬರುತ್ತದೆ. ನನ್ನ ಕ್ಷೇತ್ರದವರು ಯಾರಾದರು ಬೆಂಗಳೂರಲ್ಲಿ ಆಸ್ಪತ್ರೆಗೆ ಅಂತ ಬಂದರೇ ಅವರಿಗೆ ಎರಡು ದಿವಸಕ್ಕೆ ಕಾವೇರಿ ಗೆಸ್ಟ್ ಹೌಸ್ ಕೊಡಸಿದ್ದೇನೆ ಅಷ್ಟೇ ಎಂದರು.
24 ಗಂಟೆ ಡೆಡ್ ಲೈನ್ ವಾಪಸ್ ಪಡೆಯಬೇಕು: ಪಂಚಮಸಾಲಿ ಮೀಸಲಾತಿ ಬಗ್ಗೆ ಸ್ವಾಮೀಜಿ ಡೆಡ್ ಲೈನ್ ನೀಡಿದ ವಿಚಾರವಾಗಿ ಮಾತನಾಡಿದ ಸಿಸಿ ಪಾಟೀಲ್, ಮುಖ್ಯಮಂತ್ರಿಗಳು ಪ್ರಾಮಾಣಿಕವಾಗಿ ಹೆಜ್ಜೆಯನ್ನು ಇಡುತ್ತಿದ್ದಾರೆ. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಯಾವುದೇ ಅನ್ಯಾಯವಾಗುವುದಿಲ್ಲ. ಯತ್ನಾಳ್ ಸಹ ಸಿಎಂ ಜೊತೆ ಆತ್ಮೀಯವಾಗಿದ್ದಾರೆ. ನಾನೇ ಮುಖ್ಯಮಂತ್ರಿ ಆಗಿದ್ದರೂ 24 ಗಂಟೆಯಲ್ಲಿ ಕೊಡೋಕೆ ಆಗುತ್ತಾ?. ಅವರಿಗೆ ಮನವರಿಕೆ ಮಾಡಿಕೊಟ್ಟಿತ್ತು. ಅವರಿಗೆ ಕೋಡ್ ಆಫ್ ಕಂಡಕ್ಟ್ ಭಯವಿದೆ. ಮುಖ್ಯಮಂತ್ರಿಗಳ ಬಳಿ ಎಲ್ಲ ಸಲ್ಯೂಷನ್ ಇದೆ. ಅವರು 24 ಗಂಟೆ ಗಡುವು ವಾಪಸ್ ತಗೆದುಕೊಂಡರೆ ನಾನೇ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಸಭೆ ನಿಗದಿ ಗೊಳಿಸುತ್ತೇನೆ ಎಂದರು.
ಪಂಚಮಸಾಲಿ ಶ್ರೀ ಹೋರಾಟ ಮೆಚ್ಚುತ್ತೇನೆ: ಜಯಮೃತುಂಜಯ ಹೋರಾಟವನ್ನ ನಾನು ಮೆಚ್ಚುತ್ತೇನೆ. ಅವರ ಪಾದಯಾತ್ರೆಗೆ ನಾವು ಸಹಕಾರ ಕೊಟ್ಟಿದ್ದೆವು. ಅಂದಿನ ಗೃಹ ಸಚಿವರು ಇಂದಿನ ಮುಖ್ಯಮಂತ್ರಿಗಳು ಸಹ ಅವರ ಪಾದಯಾತ್ರೆಗೆ ಸಹಕಾರ ಕೊಟ್ಟಿದ್ದರು. ನಾನು ಸಚಿವನಾಗಿ ಸಹಕಾರ ಕೊಟ್ಟಿದ್ದೆ. ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಜಯಪ್ರಕಾಶ್ ಹೆಗ್ಡೆ ಅವರ ನೇತೃತ್ವದಲ್ಲಿ ಆಯೋಗ ನೇಮಕ ಮಾಡಿದರು. ಜಯಪ್ರಕಾಶ್ ಹೆಗ್ಡೆ ಅವರು ಅಧ್ಯಯನ ನಡೆಸಿ ಮಧ್ಯಂತರ ವರದಿಯನ್ನ ಸಲ್ಲಿಕೆ ಮಾಡಿದ್ದಾರೆ. ಅವರು ವರದಿ ನೀಡುವಿಕೆಯಲ್ಲಿ ವಿಳಂಬವಾಗಿದೆ ಅದನ್ನ ನಾವು ಒಪ್ಪಿಕೊಳ್ಳುತ್ತೇವೆ. ಕೋವಿಡ್ ಕಾರಣ ವಿಳಂಬವಾಗಿದೆ. ತದನಂತರ ಬೆಳಗಾವಿಯಲ್ಲಿ ಮಧ್ಯಂತರ ವರದಿಯನ್ನ ನೀಡಿದರು ಎಂದು ಹೇಳಿದರು.
ಯಾರಿಗೂ ಅನ್ಯಾಯವಾಗದಂತೆ ಕ್ರಮ: ಯಾರಿಗೂ ಅನ್ಯಾಯವಾಗದಂತೆ ಪಂಚಮಸಾಲಿ ಸಮುದಾಯಕ್ಕೆ 2ಡಿ ಯನ್ನ ನೀಡಲಾಗಿದೆ. ಸಮುದಾಯದ ನಾಯಕರ ಜೊತೆ ಸಿಎಂ ಮನವರಿಕೆ ಮಾತುಗಳನ್ನು ಹೇಳಿದ್ದಾರೆ. ಸ್ವಾಮೀಜಿಗೆ ಎಲ್ಲೋ ಒಂದು ಕಡೆ ವಿಳಂಬವಾಗುತ್ತಿದೆ ಅನ್ನೋ ಭಾವನೆ ಬಂದಿರಬಹುದು. ಕೋಡ್ ಆಫ್ ಕಂಡಕ್ಟ್ ಬಂದು ಎಲ್ಲೋ ವಿಳಂಬವಾಗುತ್ತೆ ಅಂದುಕೊಂಡಿರಬೇಕು. ಇದರ ಬಗ್ಗೆ ಚರ್ಚೆ ಮಾಡಬೇಕಿತ್ತು. ಆದರೇ ಸಿದ್ದೇಶ್ವರ ಶ್ರೀಗಳ ನಿಧನರಾದರು. ಜಯಮೃತುಂಜಯ ಸ್ವಾಮೀಜಿ ಅವರ ಡೆಡ್ ಲೈನ್ ಸರಿ ಅಲ್ಲ. ಬನ್ನಿ ನಮ್ಮ ಜೊತೆ ಚರ್ಚೆ ಮಾಡಿ ಎಂದು ಆಹ್ವಾನಿಸುತ್ತೇನೆ. ನಿಮ್ಮ ಹೆಜ್ಜೆ ಸರಿಯಲ್ಲ. ಡೆಡ್ ಲೈನ್ ನೀಡೋದು ಸರಿಯಲ್ಲ. ಮುಖ್ಯಮಂತ್ರಿಗಳು ಜೊತೆ ಸಮಯ ನಿಗದಿ ಮಾಡಿ ಚರ್ಚೆ ಮಾಡೋಣ. ನೀವು ಯಾವತ್ತು ಹೇಳ್ತಿರೋ ಅವತ್ತು ಮುಖ್ಯಮಂತ್ರಿಗಳೊಡನೆ ಸಭೆ ಮಾಡೋಣ ಎಂದು ಮನವಿ ಮಾಡಿದರು.
ಇದನ್ನೂ ಓದಿ:'ಕೈ' ಕಲಿಗಳ ಮೊದಲ ಪಟ್ಟಿ ಹೈಕಮಾಂಡ್ ಅಂಗಳಕ್ಕೆ, ಸಂಕ್ರಾಂತಿ ಬಳಿಕ ಬಿಡುಗಡೆ