ಬೆಂಗಳೂರು: ಪಂಚರತ್ನ ಎಂದು ಜೆಡಿಎಸ್ ವಿರುದ್ಧ ಬಿಜೆಪಿ ಟ್ವೀಟ್ ಮಾಡಿದೆ. ಹೆಚ್ ಡಿ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿ, ರೇವಣ್ಣ, ನಿಖಿಲ್, ಪ್ರಜ್ವಲ್ ಕ್ಷೇತ್ರಗಳ ಗೆಲುವೇ ಪಂಚರತ್ನ ಎಂದಿದ್ದಾರೆ. ಇದನ್ನು ಸಾಬೀತುಪಡಿಸುವುದೇ ನಮ್ಮ ಸವಾಲು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಯಶವಂತಪುರದಲ್ಲಿರುವ ಅರವಿಂದ ಮೋಟಾರ್ಸ್ ಕಂಪನಿಯ ಅಧಿಕಾರಿಗಳು ಇಂದು ವಾಹನ ಹಸ್ತಾಂತರ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಂಚರತ್ನ ಎಂಬ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಬಿಜೆಪಿಯವರು ನಮ್ಮ ಕುಟುಂಬಕ್ಕೆ ಗೌರವ ನೀಡಿದ್ದಾರೆ. ಇದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಿಡಿಕಾರಿದರು.
ಹಿಟಾಚಿ ಮೂಲಕ ಲೂಟಿ : ಸಿಕ್ಕಿದನ್ನೆಲ್ಲಾ ಲೂಟಿ ಮಾಡುತ್ತಿದ್ದಾರೆ. ಹಿಟಾಚಿ ಮೂಲಕ ಲೂಟಿ ಮಾಡುತ್ತಿದ್ದಾರೆ. ರಾಜರಾಜೇಶ್ವರಿ ನಗರಕ್ಕೆ ಸಿಎಂ ಪ್ರದಕ್ಷಿಣೆಗೆ ಹೋಗಿದ್ದಾರೆ. ಸಿಎಂ ಯಾಕೆ ಅಲ್ಲಿಗೆ ಹೋದರು?. ದಾಖಲೆಗಳಿಗೆ ಬೆಂಕಿ ಇಟ್ಟು ಲೂಟಿ ಹೊಡೆದಿರುವವರು ಇವರು. ಮಲ್ಲೇಶ್ವರಂನಲ್ಲಿ ದಾಖಲೆಗಳನ್ನು ಏನು ಮಾಡಿದರು?. ಕೆರೆ, ಕಟ್ಟೆ ನುಂಗಿರೋದನ್ನೆಲ್ಲಾ ಕಕ್ಕಿಸಲು ನಾವು ಹೊರಟಿದ್ದೇವೆ ಎಂದು ಗುಡುಗಿದರು.
ಬಸವರಾಜ ಹೊರಟ್ಟಿ ಅವರನ್ನು ನಾನೇ ಸಂತೋಷವಾಗಿ ಕಳುಹಿಸಿಕೊಟ್ಟಿದ್ದೇನೆ. ಪಕ್ಷ ಬಿಡುವಾಗ ದೇವೇಗೌಡರನ್ನು ಸ್ಮರಿಸಿದ್ದಾರೆ. ಅವರಾದರೂ ನಮ್ಮ ಕುಟುಂಬದ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ನಮ್ಮ ಪಕ್ಷದಲ್ಲೇ ಹೆಚ್ಚುವರಿ ಮತಗಳು ಇವೆ. ಕಾಂಗ್ರೆಸ್, ಬಿಜೆಪಿಗಿಂತಲೂ ನಮ್ಮ ಪಕ್ಷದಲ್ಲೇ ಹೆಚ್ಚುವರಿ ಮತಗಳಿವೆ. ಪಕ್ಷದ ಶಾಸಕರೂ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಹೇಳಿದ್ದಾರೆ. ನೋಡೋಣ ಅವಿರೋಧವಾಗಿ ಆಯ್ಕೆಯಾದರೂ ಆಗಬಹುದು ಎಂದರು.
ಪ್ರಚಾರಕ್ಕೆ 123 ವಾಹನಗಳ ಖರೀದಿ: ಜನತಾ ಜಲಧಾರೆ ಭಾರಿ ಯಶಸ್ಸು ಕಂಡ ನಂತರ ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ 'ಪಂಚರತ್ನ ಕಾರ್ಯಕ್ರಮ' ಗಳ ಪ್ರಚಾರಕ್ಕೆ ರಾಜ್ಯಾದ್ಯಂತ 123 ಎಲ್ ಇಡಿ ವಾಹನಗಳು ಸಂಚಾರ ಮಾಡಲಿವೆ. 180 ಕ್ಷೇತ್ರಗಳಲ್ಲಿ ಮುಂದಿನ 40 ದಿನಗಳ ಕಾಲ ಸಂಚರಿಸಲಿರುವ 123 ಎಲ್‌ಇಡಿ ವಾಹನಗಳು ಪಂಚರತ್ನ ಯೋಜನೆಗಳ ಕಿರುಚಿತ್ರಗಳ ಪ್ರದರ್ಶನ ಮಾಡಲಿವೆ.
ಇದನ್ನೂ ಓದಿ: ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಮೀಸಲಾತಿಗೆ ಸುಪ್ರೀಂ ಸಮ್ಮತಿ