ಬೆಂಗಳೂರು : ರಾಜ್ಯದಲ್ಲಿ ಕಳೆದ ಒಂದು ವಾರದದಿಂದ ಸುರಿದ ಭೀಕರ ಮಳೆಗೆ 17 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ. ಅದರಲ್ಲೂ ಉತ್ತರ ಕರ್ನಾಟಕ , ದಕ್ಷಿಣ ಕರ್ನಾಟಕ, ಶಿವಮೊಗ್ಗ, ಕೊಡಗಿನಲ್ಲಿ ಪ್ರವಾಹದ ಭೀಕರತೆ ಊಹಿಸಲು ಸಾಧ್ಯವಾಗುತ್ತಿಲ್ಲ. ಜನ ನೆಲೆ ಕಳೆದುಕೊಂಡು ಪುನರ್ವಸತಿ ಕೇಂದ್ರ ಸೇರಿದ್ದಾರೆ.
ಇದೀಗ ಸಂತ್ರಸ್ತರ ನೆರವಿಗೆ ಕನ್ನಡ ಚಿತ್ರರಂಗ ನೆರವಾಗುತ್ತಿದೆ. ಹಲವಾರು ನಟರು ತಮ್ಮ ಅಭಿಮಾನಿಗಳಿಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಇನ್ನು ಕೆಲವು ನಟರು ನೇರವಾಗಿ ತಾವೇ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳು, ಶಿವಣ್ಣನ ಶಿವ ಸೈನ್ಯ ಪ್ರವಾಹ ಸ್ಥಳಗಳಲ್ಲಿ ಸಂತ್ರಸ್ತರ ನೆರವಿಗೆ ನಿಂತಿವೆ.
ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬೆಂಗಳೂರಿನಿಂದ ಸುಮಾರು ಮೂರು ಟ್ರಕ್ಗಳಷ್ಟು ಅಗತ್ಯ ವಸ್ತುಗಳನ್ನು ಹೊತ್ತು ಸಂತ್ರಸ್ತರ ಕಡೆಗೆ ಹೊರಟಿದ್ದಾರೆ. ಈ ಟ್ರಕ್ಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಾಲನೆ ಕೊಟ್ಟಿದ್ದಾರೆ. ಅಲ್ಲದೆ ಸಂತ್ರಸ್ತರಿಗೆ ಪುನೀತ್ ರಾಜ್ ಕುಮಾರ್ ಒಡೆತನದ ಪಿಅರ್ ಕೆ ಸಂಸ್ಥೆ ವತಿಯಿಂದಲೂ ಸಹಾಯ ಮಾಡಲಾಗುತ್ತಿದೆ.