ಬೆಂಗಳೂರು: ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ನಗರದ ಜನತೆ ಹಬ್ಬದ ಭರಾಟೆಯಲ್ಲಿ ಕೊರೊನಾ ಮರೆತು ಭರ್ಜರಿ ಶಾಪಿಂಗ್‌ನಲ್ಲಿ ತೊಡಗಿದ್ದಾರೆ. ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಗೆ ಜನಸಾಗರವೇ ಹರಿದು ಬಂದಿದೆ. ಹೂ, ಹಣ್ಣು ತರಕಾರಿ ಸೇರಿ ಹಬ್ಬದ ವಸ್ತು ಖರೀದಿಗಾಗಿ ಜನರು ಮುಗಿಬಿದ್ದ ದೃಶ್ಯ ಕಂಡುಬಂತು.
ಬಿಬಿಎಂಪಿ ಕಮಿಷನರ್ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತೆ ಜನರು ಕೊರೊನಾ ಮರೆತು ಗುಂಪು ಗುಂಪಾಗಿ ಖರೀದಿಯಲ್ಲಿ ತೊಡಗಿದ್ದಾರೆ. ಕಳೆದೆರಡು ದಿನಗಳಿಂದಲೂ ಮಾಸ್ಕ್ ಇಲ್ಲದೆ, ಅಂತರವನ್ನೂ ಕಾಯ್ದುಕೊಳ್ಳದೆ ಕೋವಿಡ್ ನಿಯಮಗಳ ಗಾಳಿಗೆ ತೂರಲಾಗುತ್ತಿದೆ. ಜನರಿಗೆ ಎಚ್ಚರಿಕೆ ನೀಡಲು ಬಿಬಿಎಂಪಿ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳೂ ಸ್ಥಳದಲ್ಲಿ ಇಲ್ಲದಿರುವುದು ಕಂಡುಬಂದಿದೆ.
ಬನಶಂಕರಿ ದೇವಾಲಯ ಬಂದ್
ಹಬ್ಬದ ಪ್ರಯುಕ್ತ ನಗರದ ಹಲವು ದೇಗುಲಗಳಿಗೆ ಭಕ್ತಾಧಿಗಳ ದಂಡು ಹರಿದು ಬಂದಿದೆ. ನಗರದ ಬನಶಂಕರಿ ದೇವಸ್ಥಾನದಲ್ಲಿ ಭಕ್ತಾಧಿಗಳಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಿಲ್ಲ. ಬನಶಂಕರಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಹೂವಿನ ಅಲಂಕಾರ ಮಾಡಿ ದೇವಾಲಯಕ್ಕೆ ಬಾಗಿಲು ಹಾಕಲಾಗಿದೆ. ಭಕ್ತರು ದೇಗುಲದ ಬಾಗಿಲಲ್ಲೆ ನಿಂತು ನಿಂಬೆಹಣ್ಣಿನ ದೀಪ, ಬೆಲ್ಲದ ದೀಪ ಬೆಳಗುತ್ತಿದ್ದಾರೆ. ಮುಂದಿನ ಭಾನುವಾರದವರೆಗೂ ಬನಶಂಕರಿ ದೇವಾಲಯ ಬಂದ್ ಮಾಡಲಾಗಿದ್ದು, ಮೂರು ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಇದನ್ನೂ ಓದಿ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಹಾವಳಿ: ಒಂದೇ ತಿಂಗಳಲ್ಲಿ 200ಕ್ಕೂ ಹೆಚ್ಚು ಪ್ರಕರಣ ಪತ್ತೆ