ಬೆಂಗಳೂರು: ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಸದಸ್ಯರಿಂದ ಮಂಗಳವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಹಕ್ಕುಚ್ಯುತಿ ದೂರನ್ನು ಸಲ್ಲಿಸಲು ಚಿಂತನೆ ನಡೆಸಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದು ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಆರೋಪವಲ್ಲ. ಈ ಸಮಿತಿಯಲ್ಲಿ ಎಲ್ಲಾ ಪಕ್ಷದವರು ಇರುತ್ತಾರೆ. ಮೇಲ್ನೋಟಕ್ಕೆ ಕೆಲ ಕಡೆ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಮಿತಿ ಲೆಕ್ಕಪತ್ರ ಪರಿಶೀಲನೆ ಮಾಡಬೇಕು. ಆದರೆ ನೋಟಿಸ್ ಜಾರಿ ಮಾಡಿದ್ದು ಸರಿಯಲ್ಲ ಎಂದರು.
ಈ ಸಂಬಂಧ ಸ್ಪೀಕರ್ ವಿರುದ್ಧ ಪದಚ್ಯುತಿ ದೂರು ನೀಡಬೇಕೋ, ಬೇಡವೋ ಎಂಬ ಪ್ರಶ್ನೆ ಇದೆ. ಜೂನ್ 2ರಂದು ಸಮಿತಿ ಸಭೆ ನಡೆಯಲಿದ್ದು, ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸ್ಪೀಕರ್ ನೋಟಿಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಾರ್ವಜನಿಕ ಸಮಿತಿಯ ಕೆಲಸಕ್ಕೆ ಇಲ್ಲಿಯವರೆಗೂ ಅಡ್ಡಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಅಡ್ಡಿಯಾಗಿದೆ ಎಂದು ಆರೋಪಿಸಿದರು.
ನಾವು ಕೇಳಿರುವ ವರದಿಗಳನ್ನು ಆಯಾ ಇಲಾಖಾ ಅಧಿಕಾರಿಗಳು ನಮಗೆ ಸಲ್ಲಿಸಿಲ್ಲ. ಇದನ್ನು ಸಮಿತಿ ತಪಾಸಣೆ ಮಾಡಬೇಕು. ಕೂಡಲೇ ಸಚಿವ ಶ್ರೀರಾಮುಲು ವರದಿಯನ್ನು ಕಳಿಸುವಂತೆ ಅಧಿಕಾರಿಗಳಿಗೆ ಸೂಚಸಬೇಕೆಂದು ಆಗ್ರಹಿಸಿದರು.
ಇದೆ ವೇಳೆ ಸ್ಯಾನಿಟೈಸರ್ ಖರೀದಿ ಕುರಿತು ವಿವರಿಸಿದ ಪಾಟೀಲ್, ಸರ್ಕಾರ ಅರ್ಧ ಲೀಟರ್ ಸ್ಯಾನಿಟೈಸರ್ 97 ರೂ.ಗೆ ಆರ್ಡರ್ ಮಾಡಿದೆ. ಸರ್ಕಾರ ಹೇಳಿದಷ್ಟು ಪ್ರಮಾಣದಲ್ಲಿ ಇವರು ಪೂರೈಕೆ ಮಾಡುವುದಕ್ಕೆ ಆಗಿಲ್ಲ. ಆದರೆ ಮತ್ತೆ ಕರೆದ ಮತ್ತೊಂದು ಟೆಂಡರ್ನಲ್ಲಿ ಅದೇ ಅರ್ಧ ಲೀಟರ್ಗೆ 250 ರೂಪಾಯಿಗೆ ಖರೀದಿಗೆ ಸರ್ಕಾರ ಒಪ್ಪಿದೆ ಎಂದು ವಿವರಿಸಿದರು.