ಬೆಂಗಳೂರು: ವೇತನ ತಾರತಮ್ಯ ಹಾಗೂ ಕುಮಾರನಾಯಕ್ ವರದಿ ಜಾರಿಗೆ ಆಗ್ರಹಿಸಿ ಪಿಯು ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಇದಕ್ಕೂ ಪೂರ್ವದಲ್ಲಿ ಇಂದು ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು.
ಆದ್ರೆ ಪಿಯು ಉಪನ್ಯಾಸಕರ ಈ ನಡೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ರಾಜಕೀಯ ಕಾರಣಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಬಲಿ ಕೊಡುವುದು ಹಿಂಸಾತ್ಮಾಕ ಕೆಲಸವಾಗಲಿದೆ ಎಂದಿದ್ದಾರೆ. ಈ ವೇಳೆ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರ ಹೆಸರನ್ನ ಉಲ್ಲೇಖಿಸಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಇದೇ ರೀತಿಯಾಗಿ ಫ್ರೀಡಂ ಪಾರ್ಕ್ನಲ್ಲಿ ಉಪನ್ಯಾಸಕರು, 18 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ್ರು.
ಇದೀಗ ಮತ್ತೆ ಅದೇ ಹಾದಿ ತುಳಿದಿರುವ ಪಿಯು ಉಪನ್ಯಾಸಕರು, ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಇಂದು ಎರಡನೇ ಹಂತದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿರುವ ಉಪನ್ಯಾಸಕರು, ಬೇಡಿಕೆ ಈಡೇರದೇ ಹೋದರೆ ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಇನ್ನು, ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ನಾಳೆ ನಾನು ಉಪನ್ಯಾಸಕ ಸ್ಥಾನಕ್ಕೆ ಸ್ವಯಂ ನಿವೃತ್ತಿ ಪಡೆದುಕೊಳ್ಳುತ್ತಿದ್ದೇನೆ. ಇದಾದ ಬಳಿಕ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೀನಾ ಇಲ್ವಾ ಅಂತ ನಂತರ ಹೇಳುತ್ತೇನೆ. ಆದರೆ ಚುನಾವಣೆಗೂ ಮುನ್ನವೇ ಸಚಿವರು ಈ ರೀತಿ ಹೇಳಿಕೆ ಕೊಟ್ಟಿರೋದು ಸರಿಯಲ್ಲ. ಯಾಕಂದರೆ ನಾಳೆ ಮಧ್ಯರಾತ್ರಿ 12 ಗಂಟೆಯವರೆಗೂ ನಾನು ಉಪನ್ಯಾಸಕ ಅಂತ ಸಚಿವರಿಗೆ ಪುರ್ಲೆ ತಿರುಗೇಟು ನೀಡಿದ್ದಾರೆ.
ಈ ಹಿಂದೆಯೂ ಕೂಡ 18 ದಿನಗಳ ಕಾಲ ಉಪನ್ಯಾಸಕರು ಪ್ರತಿಭಟನೆ ನಡೆಸಿದಾಗ, ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡರ ವಿರುದ್ಧ ಆರೋಪ ಕೇಳಿ ಬಂದಿತ್ತು. ಇದೀಗ ಮತ್ತೆ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರ ವಿರುದ್ಧ ಸ್ವತಃ ಸಚಿವರೇ ಆರೋಪ ಮಾಡಿದ್ದು, ಪಿಯು ಉಪನ್ಯಾಸಕರ ಪ್ರತಿಭಟನೆ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ.