ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಇದುವರೆಗೂ ಬಂಧಿತರಾದ ಅಭ್ಯರ್ಥಿಗಳನ್ನು ಭವಿಷ್ಯದ ಪೊಲೀಸ್ ನೇಮಕಾತಿ ಅವಕಾಶದಿಂದಲೂ ನೇಮಕಾತಿ ವಿಭಾಗ ನಿರ್ಬಂಧಿಸಿದೆ. ಇದುವರೆಗಿನ ತನಿಖೆಯಲ್ಲಿ ಬಂಧಿತರಾದ 51 ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗದಂತೆ ತಡೆಯಲು ಅವರ ಆಧಾರ್ ಸಂಖ್ಯೆ ಆಧರಿಸಿ ರಾಜ್ಯ ಪೊಲೀಸ್ ನೇಮಕಾತಿ ವಿಭಾಗ ನಿರ್ಬಂಧ ವಿಧಿಸಿದೆ.
ಆಕ್ರಮ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿಯಿಂದ ಈಗಾಗಲೇ ಬಂಧಿತ ಅಭ್ಯರ್ಥಿಗಳ ಮಾಹಿತಿ ಪಡೆದಿರುವ ಪೊಲೀಸ್ ನೇಮಕಾತಿ ವಿಭಾಗ ಅಂಥಹ ಅಭ್ಯರ್ಥಿಗಳಿಗೆ ಭವಿಷ್ಯದಲ್ಲಿ ಅವಕಾಶ ದೊರೆಯದಂತೆ ತಡೆಯಲು ಅವರ ಆಧಾರ್ ನಂಬರ್ ಅನ್ನು ಇಲಾಖೆಯ ವೆಬ್ಸೈಟ್ಗೆ ಲಿಂಕ್ ಮಾಡಿದೆ. ಇದರಿಂದಾಗಿ ಭವಿಷ್ಯದ ನೇಮಕಾತಿಗಳಿಗೆ ಆ ಅಭ್ಯರ್ಥಿಗಳ ಅರ್ಜಿಯೇ ಸ್ವೀಕೃತವಾಗದಂತೆ ನಿರ್ಬಂಧಿಸಲಾಗಿದೆ.
ಯಾವುದೇ ಹುದ್ದೆಯ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸುವಾಗ ಆಧಾರ್ ನಂಬರ್ ನೀಡುವುದು ಕಡ್ಡಾಯವಾಗಿದೆ. ಆದ್ದರಿಂದ ಆರೋಪಿತ ಅಭ್ಯರ್ಥಿಗಳ ಅರ್ಜಿ ಸ್ವೀಕೃತವಾಗುವುದಿಲ್ಲ. ಭವಿಷ್ಯದಲ್ಲಿ ಅಕ್ರಮದಲ್ಲಿ ತೊಡಗುವವರಿಗೂ ಸಹ ಈ ಮೂಲಕ ಖಡಕ್ ಸಂದೇಶ ರವಾನೆಯಾಗಲಿದೆ ಎಂದು ಪೊಲೀಸ್ ನೇಮಕಾತಿ ವಿಭಾಗದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣ: ಸಿಐಡಿ ಸಲ್ಲಿಸಿದ ಚಾರ್ಜ್ ಶೀಟ್ನಲ್ಲಿ ಏನಿದೆ?