ಬೆಂಗಳೂರು: ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಪಿಎಸ್ಐ ಮರು ಪರೀಕ್ಷೆ ದಿನಾಂಕ ಪ್ರಕಟಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಪಿಎಸ್ಐ ಅಕ್ರಮ ಪ್ರಕರಣ ತನಿಖೆಯನ್ನು ಸಿಐಡಿ ಪೊಲೀಸರು ನಡೆಸುತ್ತಿದ್ದಾರೆ. ಚಾರ್ಚ್ ಶೀಟ್ ಆಗುವವರೆಗೂ ಏನೂ ಹೇಳುವುದಕ್ಕೆ ಆಗುವುದಿಲ್ಲ. ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ರೀ ಎಕ್ಸಾಂ ಮಾಡುತ್ತೇವೆ. ಕಳಂಕಿತರು ಮತ್ತೆ ಪರೀಕ್ಷೆ ಬರೆಯಬಾರದು. ತಪ್ಪಿತಸ್ಥ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅವಕಾಶ ಸಿಗಕೂಡದು. ಈ ಸಲುವಾಗಿ ಪರೀಕ್ಷೆ ದಿನಾಂಕ ಪ್ರಕಟಿಸಿಲ್ಲ. ಇನ್ನೆರಡು ತಿಂಗಳಲ್ಲಿ ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಡೇಟ್ ಅನೌನ್ಸ್ ಮಾಡುತ್ತೇವೆ ಎಂದು ಡಿಜಿ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸುವುದಾಗಿ ಸರ್ಕಾರ ಘೋಷಿಸಿತ್ತು. ಸದ್ತಯ ಹಗರಣದ ತನಿಖೆ ನಡೆಯುತ್ತಿದ್ದು, ಚಾರ್ಜ್ ಶೀಟ್ ಸಲ್ಲಿಕೆ ಬಳಿಕವಷ್ಟೇ ಮರು ಪರೀಕ್ಷೆ ನಡೆಸಲು ಇಲಾಖೆ ತೀರ್ಮಾನಿಸಿದೆ.
ಪಿಎಸ್ಐ ಹಗರಣ ಸಂಬಂಧ ಈಗಾಗಲೇ ಹಿರಿಯ ಐಪಿಎಸ್ ಅಧಿಕಾರಿ, ಅಭ್ಯರ್ಥಿಗಳು ಸೇರಿ ಹಲವರನ್ನು ಸಿಐಡಿ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಇನ್ನೊಂದೆಡೆ ಪಿಎಸ್ಐ ಪರೀಕ್ಷೆ ರದ್ದುಗೊಳಿಸಿದ್ದನ್ನು ವಿರೋಧಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸದನದಲ್ಲೂ ಪಿಎಸ್ಐ ಹಗರಣ ಸದ್ದು ಮಾಡುತ್ತಿದೆ.
(ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪ್ರಕರಣ.. ಆರೋಪಿ ನಿವಾಸದ ಬಳಿ ತಮಟೆ ಬಾರಿಸಿ ನೋಟಿಸ್ ಅಂಟಿಸಿದ ಸಿಐಡಿ)