ಬೆಂಗಳೂರು : ಪಿಎಸ್ಐ ಪರೀಕ್ಷಾ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಕುರಿತಂತೆ ಕೂಲಂಕಶವಾಗಿ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಬಿ ವೀರಪ್ಪ ನೇತೃತ್ವದ ಏಕಸದಸ್ಯ ಆಯೋಗ ರಚಿಸಿತ್ತು. ಕಳೆದ ಜುಲೈ 21 ರಂದು ಅಕ್ರಮ ನಡೆದಿರುವ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನ್ಯಾಯಾಂಗ ತನಿಖೆಗೆ ಒಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾ. ವೀರಪ್ಪ ನೇತೃತ್ವದ ತಂಡ ಇಂದು ಸಿಐಡಿ ಪ್ರಧಾನ ಕಚೇರಿಯ ಸ್ಟ್ರಾಂಗ್ ರೂಮ್ಗೆ ಭೇಟಿ ನೀಡಿ ಪರಿಶೀಲಿಸಿತು. ಸಿಐಡಿ ಡಿಜಿ ಎಂ ಎಂ ಸಲೀಂ ಹಾಗೂ ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್ ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾ ಬಿ ವೀರಪ್ಪ ಅವರು, ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮ ಸಂಬಂಧ ರಾಜ್ಯ ಸರ್ಕಾರ ಹಗರಣವನ್ನ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ನಮ್ಮ ಆಯೋಗ ಇಂದು ಸಿಐಡಿ ಸ್ಟ್ರಾಂಗ್ ರೂಮ್ಗೆ ಭೇಟಿ ನೀಡಿ ಪರಿಶೀಲಿಸಿದೆ. ಈಗಾಗಲೇ 28 ಜನರ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಈ ತಿಂಗಳ 15 ರಿಂದ ಸ್ಟ್ರಾಂಗ್ ರೂಮ್ಗೆ ಬಲವಂತವಾಗಿ ನುಗ್ಗಿದ ಆರೋಪಿತರ ಹೇಳಿಕೆ ಹಾಗೂ ಸಾಕ್ಷ್ಯಾಧಾರ ಕಲೆ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ. ಬಹುತೇಕ ತಿಂಗಳಾಂತ್ಯದಲ್ಲಿ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಸ್ಟ್ರಾಂಗ್ ರೂಮ್ಗೆ ಭೇಟಿ ಮಾಡಿ ಪರಿಶೀಲಿಸಲಾಗಿದ್ದು, ಇನ್ನಷ್ಟು ಸುಧಾರಣೆಯಾಗಬೇಕಿದೆ. ಇರುವ ಲೋಪದೋಷಗಳ ಬಗ್ಗೆ ಸರಿಪಡಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗುವುದು. ದೇಶ ಕಾಯುವ ಸೈನಿಕರ ರೀತಿಯಲ್ಲಿ ಪೊಲೀಸರು ಸಹ ಕಾರ್ಯನಿರ್ವಹಿಸುತ್ತಾರೆ. ಪೊಲೀಸ್ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮವಾದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಿದಂತೆ ಆಗಲಿದೆ. ಭವಿಷ್ಯದಲ್ಲಿ ಅಕ್ರಮಗಳು ಆಗದಂತೆ ತಡೆಯಬೇಕಿದೆ ಎಂದು ಹೇಳಿದರು.
ಕಳೆದ ಬಿಜೆಪಿ ಸರ್ಕಾರದಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಭಾರಿ ಸದ್ದು ಮಾಡಿತ್ತು. ಕಾಂಗ್ರೆಸ್ ಇದೇ ವಿಚಾರವಾಗಿ ಬಿಜೆಪಿ ಸರ್ಕಾರ ಹಾಗೂ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಹೋರಾಟವನ್ನೇ ನಡೆಸಿತ್ತು. ಈ ಅಕ್ರಮವನ್ನು ತನಿಖೆ ನಡೆಸುವುದಾಗಿ ಕಾಂಗ್ರೆಸ್ ಹೇಳಿತ್ತು. ಇದೀಗ ಅಧಿಕಾರಕ್ಕೆ ಬಂದ ತಕ್ಷಣ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಕ್ರಮವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಏಕ ಸದಸ್ಯ ತನಿಖಾ ಆಯೋಗ ನೇಮಿಸಿ ಸರ್ಕಾರ ಆದೇಶ