ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ಅಂಗಡಿಗಳು ಪ್ರತಿನಿತ್ಯ ಕಾರ್ಯನಿರ್ವಹಿಸುತ್ತಿದ್ದು ಲಾಕ್ಡೌನ್ನಿಂದ ಕಳೆದ ಒಂದು ತಿಂಗಳಿನಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಈ ಹಿನ್ನೆಲೆ ಸಣ್ಣ ಅಂಗಡಿಗಳಲ್ಲಿ ಕೆಲಸ ಮಾಡುವ ಎಲ್ಲ ನೌಕರರಿಗೂ ಪರ್ಯಾಯವಾಗಿ ಆರ್ಥಿಕ ಪರಿಹಾರ ಘೋಷಿಸಬೇಕು ಎಂದು ಸಗಟು ಜವಳಿ ವ್ಯಾಪಾರಿ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಕಳೆದ ವರ್ಷ ದೇಶದಲ್ಲಿ ಲಾಕ್ಡೌನ್ ಇದ್ದ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಅಂಗಡಿ ವ್ಯಾಪಾರಿಗಳು ಸಂಪೂರ್ಣ ಸಹಕಾರ ನೀಡಿದ್ದು, ಸರ್ಕಾರ ನೀಡಿದ್ದ ದಿನಾಂಕದ ವರೆಗೂ ವ್ಯಾಪಾರ ವಹಿವಾಟನ್ನು ನಿಲ್ಲಿಸಿದ್ದವು. ಕೋವಿಡ್ ಎರಡನೇ ಅಲೆ ರಾಜ್ಯದಲ್ಲಿ ಮತ್ತೆ ಈ ತಿಂಗಳು ಅಧಿಕವಾಗಿ ಹರಡುವಿಕೆ ತಡೆಯಲು ಮತ್ತೆ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಇದರಿಂದ ತಡೆಯಲಾಗದಷ್ಟು ಆರ್ಥಿಕ ಸಂಕಷ್ಟಕ್ಕೆ ಅಂಗಡಿ ಮಾಲೀಕರು ಸಿಲಿಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಣ್ಣ ಅಂಗಡಿಯಲ್ಲಿ ಕನಿಷ್ಠ ಎಂದರೂ ಇಬ್ಬರು ನೌಕರರು ಸಂಬಳಕ್ಕೆ ದುಡಿಯುತ್ತಿದ್ದಾರೆ, ಇವರಿಗೆ ಈ ಸಂದರ್ಭದಲ್ಲಿ ವೇತನ ನೀಡಲು ಆಗುತ್ತಿಲ್ಲ. ಜೊತೆಗೆ ಆಸ್ತಿ ತೆರಿಗೆ, ಸಾಲದ ಕಂತು, ಜಿಎಸ್ಟಿ ಸೇರಿದಂತೆ ಇತರೆಗಳ ಬಗ್ಗೆ ಸರ್ಕಾರ ವಿನಾಯಿತಿ ನೀಡಿಲ್ಲ. ಕೂಡಲೇ ಸರ್ಕಾರ ಸಣ್ಣ ಉದ್ಯಮಿದಾರರ ಕಷ್ಟಗಳನ್ನು ಅರಿತು ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹ ಮಾಡಿದರು.