ಬೆಂಗಳೂರು: ಮೀನು ಮರಿಗಳ ಉತ್ಪಾದನೆ, ಕೊಳಗಳ ನಿರ್ಮಾಣವೂ ಸೇರಿದಂತೆ 26 ಸಾವಿರ ಕೆರೆಗಳ ಪೈಕಿ ಮೀನುಗಾರಿಕೆಗೆ ಸಿದ್ಧವಾದ ಕೆರೆಗಳ ಅಧ್ಯಯನ ವರದಿ ನೀಡುವಂತೆ ಅಧಿಕಾರಿಗಳಿಗೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ರಾಜ್ಯದಲ್ಲಿ ಮೀನುಗಾರಿಕೆ ಉದ್ಯಮವಾಗಿ ಬೆಳೆಯಲು ಒಳನಾಡು ಜಲ ಸಂಪನ್ಮೂಲಗಳನ್ನು ಬಳಸಿಕೊಂಡು ಮೀನುಗಾರಿಕೆ ಮತ್ತು ಜಲಕೃಷಿಯ ಅಭಿವೃದ್ಧಿಯ ಕುರಿತು ಸಚಿವರು ಇಂದು ವಿಕಾಸಸೌಧದಲ್ಲಿ ಪರಿಣಿತರ ಸಭೆ ನಡೆಸಿದರು.
ಪ್ರಸ್ತುತ ದಿನಗಳಲ್ಲಿ 50 ಕೋಟಿ ಮೀನು ಮರಿಗಳ ಅವಶ್ಯಕತೆಯಿದ್ದು, ಶೇ 50ರಷ್ಟು ಮಾತ್ರ ಮೀನು ಮರಿಗಳ ಪೂರೈಕೆ ಆಗುತ್ತಿದೆ. ಹೆಚ್ಚುವರಿ ಉತ್ಪಾದನೆಗೆ ಅಗತ್ಯ ಯೋಜನೆ ರೂಪಿಸಬೇಕು. ದೇಶದಲ್ಲಿ ಒಳನಾಡು ಮೀನುಗಾರಿಕೆಯಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. ಮೀನು ಉತ್ಪಾದನೆ ಹೆಚ್ಚಳ, ಸುಧಾರಿತ ತಾಂತ್ರಿಕ ವಿಧಾನಗಳನ್ನು ವಿಸ್ತರಿಸಬೇಕಿದೆ ಎಂದರು.
ಒಳನಾಡು ಮೀನುಗಾರಿಕೆಯಲ್ಲಿ ಹೊಸ ತಳಿಗಳ ಸಂಶೋಧನೆಗೆ 2.5 ಲಕ್ಷ ಹೆಕ್ಟೇರ್ ಸವಳು - ಜವಳು ಪ್ರದೇಶದಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸುವುದು. ಮೀನುಗಾರರ ತರಬೇತಿ ಕೇಂದ್ರಗಳಿಗೆ ಕಾಯಕಲ್ಪ ನೀಡುವುದು. ಪ್ರವಾಸೋದ್ಯಮ ಹಾಗೂ ಕ್ರೀಡಾ ಮೀನುಗಾರಿಕೆಯನ್ನು ಅಳವಡಿಸಿಕೊಳ್ಳವುದು. ಬೆಂಗಳೂರು ಸೇರಿದಂತೆ ರಾಜ್ಯದ ಆಯ್ದ ಭಾಗಗಳಲ್ಲಿ ಮೀನುಗಾರಿಕೆ ಕ್ರೀಡೆಯ ಉತ್ತೇಜಿಸಲು ಗಾಳ ಹಾಕಿ ಮೀನು ಹಿಡಿಯುವ ಪದ್ಧತಿ ಜನಪ್ರಿಯಗೊಳಿಸಲು ಸಭೆಯಲ್ಲಿ ಸಹಮತ ನೀಡಿಲಾಯಿತು.
ಅಂಬಿಗರ ಚೌಡಯ್ಯ ನಿಗಮದ ವತಿಯಿಂದ ಮೀನುಗಾರಿಕೆ ತರಬೇತಿ ಹಾಗೂ ಮೀನು ಸಾಕಣಿಕೆಯ ಬಗ್ಗೆ ಹಲವಾರು ನಿರ್ಣಯವನ್ನು ಸಭೆ ಕೈಗೊಂಡಿತು. ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಬಹುತೇಕ ಹಿರಿಯ ನಿವೃತ್ತ ಅಧಿಕಾರಿಗಳು, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ, ಮೀನುಗಾರಿಕೆ ಕಾಲೇಜು ಡೀನ್ ಸೇಂಥಿಲ್ ವೇಲ್ ಇತರರು ಉಪಸ್ಥಿತರಿದ್ದರು.