ಬೆಂಗಳೂರು: ಕೋವಿಡ್ 19 ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯ ಹಾಗೂ ಜನವಿರೋಧಿ ನೀತಿ, ಪೆಟ್ರೋಲ್ ಡೀಸೆಲ್ ದರ ಏರಿಕೆ, ಗ್ರಾಮ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಿರುವುದನ್ನು ವಿರೋಧಿಸಿ, ಕಾಂಗ್ರೆಸ್ ಜೂನ್ 29ರಂದು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದೆ ಎಂದು ಡಿಕೆಶಿ ತಿಳಿಸಿದರು.
ಪ್ರತಿಭಟನೆಯ ರೂಪುರೇಷೆ ಸ್ವರೂಪ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಇಂದು ಸಂಜೆ ನಡೆದ ಹಿರಿಯ ನಾಯಕರ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಸೈಕಲ್ ಜಾಥಾ ನಡೆಸಲು ನಿರ್ಧರಿಸಲಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ನಾನು ಸಹ ಮನೆಯಿಂದಲೇ ಸೈಕಲ್‌ನಲ್ಲಿ ಬರುತ್ತೇವೆ. ಅದೇ ರೀತಿ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಸೈಕಲ್ ನಲ್ಲಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸೋಮವಾರ ನಡೆಯುವ ಪ್ರತಿಭಟನೆಗೆ ಸರ್ಕಾರದಿಂದ ಅನುಮತಿ ಸಿಗುತ್ತದೋ, ಇಲ್ಲವೋ ನಮಗೆ ಗೊತ್ತಿಲ್ಲ. ಆದರೆ, ಎಲ್ಲಾ ಕಾರ್ಯಕರ್ತರು ಸೈಕಲ್ ನಲ್ಲಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.