ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಮರಣ ಹೊಂದಿದ ನೌಕರರ ಅವಲಂಬಿತರಿಗೆ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಅನುಕಂಪ ಆಧಾರಿತ ಹುದ್ದೆಯನ್ನು ನೀಡಿ ಆದೇಶಿಸಿರುವುದನ್ನು ತಡೆಹಿಡಿಯುವಂತೆ ಒತ್ತಾಯಿಸಿ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ನೌಕರರು ಪ್ರತಿಭಟನೆ ನಡೆಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನು ಒತ್ತಾಯಿಸಿದ ಸಿಬ್ಬಂದಿ, ಸಚಿವಾಲಯದ ನೌಕರರ ಸಂಘ ಈ ಹಿಂದೆ ಬರೆದ ಪತ್ರದಲ್ಲಿ ಹಾಗೂ ಖುದ್ದಾಗಿ ಮಾಡಿದ ಭೇಟಿ ಸಂದರ್ಭ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಮರಣ ಹೊಂದಿದ ನೌಕರರ ಅವಲಂಬಿತರಿಗೆ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಅನುಕಂಪದ ಆಧಾರಿತ ಹುದ್ದೆಯನ್ನು ನೀಡಬಾರದು. ಬದಲಿಗೆ ಅವರ ಮಾತೃ ಇಲಾಖೆಯಲ್ಲಿ ಅನುಕಂಪ ಆಧಾರಿತ ಹುದ್ದೆಯನ್ನು ನೀಡುವಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಂಘಕ್ಕೆ ಭರವಸೆ ನೀಡಿದ್ದರು. ಇದೀಗ ಆ ಭರವಸೆ ಈಡೇರಿಸುವಂತೆ ಒತ್ತಾಯಿಸಿದರು.
ಓದಿ:ಬಿಡಿಎ ವಾಣಿಜ್ಯ ಮಳಿಗೆಗಳ ಬಾಕಿ ವಸೂಲಿ ಮಾಡಲು ವಿಫಲರಾದ ಅಧಿಕಾರಿಗಳಿಗೆ ತರಾಟೆ!
ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ದಿ. ಕೆ.ವಿ. ರವಿ ಪತ್ನಿ ಪದ್ಮಜಾ ಡಿ. ಅವರಿಗೆ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿ ಆದೇಶ ನೀಡಿರುವುದನ್ನು ಸಂಘವು ಪ್ರಬಲವಾಗಿ ವಿರೋಧಿಸುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಶೇ.30 ರಷ್ಟು ಹುದ್ದೆಗಳು ಖಾಲಿ ಇದ್ದಾಗ್ಯೂ ಸದರಿ ಇಲಾಖೆಗೆ ಅನುಕಂಪದ ಆಧಾರದ ಮೇಲೆ ಪದ್ಮಜಾ ಅವರನ್ನು ನೇಮಕಾತಿ ಮಾಡಿರಲಿಲ್ಲ. ಒತ್ತಡದ ಹಿನ್ನೆಲೆ ಸಚಿವಾಲಯ ಸೇವೆಯಲ್ಲಿ ಹುದ್ದೆ ನೀಡಿರುವುದನ್ನು ಖಂಡಿಸುತ್ತೇವೆ ಮತ್ತು ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸುತ್ತೇವೆ. ಇಲ್ಲವಾದರೆ ಈ ಪ್ರಕರಣವು ಪೂರ್ವ ನಿದರ್ಶನವಾಗಿ ಎಲ್ಲ ಇಲಾಖೆಯ ಅನುಕಂಪದ ಹುದ್ದೆಗಳನ್ನು ಸಚಿವಾಲಯದಲ್ಲಿಯೇ ನೀಡುವಂತೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಒತ್ತಡಗಳು ಬರುವ ಸಾಧ್ಯತೆ ಇದೆ.