ಬೆಂಗಳೂರು: ಫೆ.14 ಮತ್ತು 15ರಂದು ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯ ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರ ಶಾಲಾ ಮಕ್ಕಳು, ಮಹಿಳೆಯರಿಗೆ ತೊಂದರೆ ಕೊಡುತ್ತಿದೆ. ಯಾವ ಪ್ರಕರಣಕ್ಕೆ ಯಾವ ಕೇಸ್ ದಾಖಲಿಸಬೇಕು ಎಂದು ಪೊಲೀಸರು ಯೋಚಿಸುತ್ತಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆ ಮೇಲೆ ದೇಶ ದ್ರೋಹ ಕೇಸ್ ಹಾಕಲ್ಲ. ಆದರೆ, ಯುಟಿ ಖಾದರ್, ಶಾಹಿನ್ ಸ್ಕೂಲ್ ಮೇಲೆ ದೇಶ ದ್ರೋಹದ ಕೇಸ್ ದಾಖಲಿಸುತ್ತಾರೆ. ಅಂದರೆ ವಿರೋಧ ಮಾಡುವವರ ಬಾಯಿ ಮುಚ್ಚಿಸುವ ಕೆಲಸ ಮಾಡ್ತಿದ್ದಾರೆ. ರೇಣುಕಾಚಾರ್ಯ ಏನೋನೋ ಹೇಳಿಕೆಗಳನ್ನು ಕೊಡ್ತಾರೆ. ಕೀಳುಮಟ್ಟದ ರಾಜಕಾರಣವನ್ನು ಬಿಜೆಪಿ ನಾಯಕರು ಮಾಡ್ತಿದ್ದಾರೆ. ಇದನ್ನು ವಿರೋಧಿಸಿ 15ರಂದು ಗಾಂಧಿ ಪ್ರತಿಮೆಯಿಂದ ಧರಣಿ ಹಮ್ಮಿಕೊಂಡಿದ್ದೇವೆ ಎಂದರು.
ಬಡ್ತಿ ಮೀಸಲಾತಿ ವಿಚಾರಕ್ಕೂ ಉತ್ತರಾಖಂಡ ಸರ್ಕಾರ ಸೂಕ್ತ ವಾದವನ್ನೇ ಮಂಡಿಸಲಿಲ್ಲ. ಸಂವಿಧಾನಕ್ಕೆ ವಿರುದ್ದವಾದ ತೀರ್ಪು ಬಂದಿದೆ. ಮೀಸಲಾತಿ ವಿಚಾರವಾಗಿ, ದೇಶದ್ರೋಹ ಪ್ರಕರಣದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ತಿಳಿಸಿದರು.