ಬೆಂಗಳೂರು: ಕೋಲಾರದ ರೈತ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಕಾನೂನು ಸಚಿವ ಮಾಧುಸ್ವಾಮಿ ರಾಜೀನಾಮೆ ನೀಡಬೇಕು ಹಾಗೂ ಸೂಕ್ತ ಕಾನೂನು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ. ಪುಷ್ಪ ಅಮರನಾಥ್ ನೇತೃತ್ವದ ನಿಯೋಗ ಪ್ರತಿಭಟನೆ ನಡೆಸಿತು.
ನಿನ್ನೆ ಕೋಲಾರಕ್ಕೆ ಭೇಟಿ ಕೊಟ್ಟಿದ್ದ ಸಚಿವ ಮಾಧುಸ್ವಾಮಿ ಬಳಿ ಸಮಸ್ಯೆ ಹೇಳಿಕೊಳ್ಳಲು ಬಂದ ರೈತ ಮಹಿಳೆಗೆ ರಾಸ್ಕಲ್ ಎಂದು ಸಾರ್ವಜನಿಕವಾಗಿ ನಿಂದಿಸಿರುವುದು ಸರಿಯಿಲ್ಲ. ಹೀಗಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್ 354, 506 ನಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕೆಂದು ಕಾಂಗ್ರೆಸ್ ನಿಯೋಗ ಪಟ್ಟು ಹಿಡಿದು ಪ್ರತಿಭಟನೆ ನಡೆಸಿತು.
ರಾಜ್ಯ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರು ಪ್ರತಿಭಟನಾಕಾರರ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇನ್ನೊಂದೆಡೆ ಶಿವಮೊಗ್ಗದ ಸಾಗರ ಪೊಲೀಸ್ ಠಾಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ ವಕೀಲ ಪ್ರವೀಣ್ ಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಸೋನಿಯಾ ಗಾಂಧಿ ಅವರ ಹೇಳಿಕೆ ತಿರುಚಿ ಎಫ್ಐಆರ್ ದಾಖಲು ಮಾಡಲಾಗಿದೆ. ಇದಕ್ಕೆ ಕಾರಣರಾದವರು ಪ್ರವೀಣ್. ಹೀಗಾಗಿ ಘಟನೆ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮತ್ತೊಂದು ದೂರು ನೀಡಿದ್ದಾರೆ.