ಬೆಂಗಳೂರು: ವಲಸೆ ಕಾರ್ಮಿಕರ ಸಾಂವಿಧಾನಿಕ ಹಕ್ಕುಗಳು ಉಲ್ಲಂಘಟನೆಯಾಗುತ್ತಿವೆ. ಸುರಕ್ಷಿತವಾಗಿ ಊರು ಸೇರಲು ಉಚಿತ ಪ್ರಯಾಣದ ವ್ಯವಸ್ಥೆಗೆ ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.
ಉತ್ತರ ಪ್ರದೇಶದ ಗೋರಖ್ಪುರಕ್ಕೆ ನಡೆದುಕೊಂಡೇ ಹೋಗಲು ವಲಸೆ ಕಾರ್ಮಿಕರು ನಿರ್ಧರಿಸಿದ್ದಾರೆ. ಆದರೆ ಪೋಲೀಸರು ಅವರನ್ನು ಬಿಡುತ್ತಿಲ್ಲ. ಊಟ-ವಸತಿಯ ಸೌಲಭ್ಯವಿಲ್ಲದ ಕಾರಣ ಕಂಗೆಟ್ಟು ಊರ ಕಡೆಗೆ ನಡೆಯುತ್ತಿದ್ದಾರೆ. ಹೆಚ್ಚಿನ ಕಾರ್ಮಿಕರು ಕಟ್ಟಡ ನಿರ್ಮಾಣ, ಟೈಲ್ಸ್ ಕೆಲಸಗಳಲ್ಲಿ ತೊಡಗಿದ್ದರು. ಈಗ ಕೆಲಸ ಕೊಟ್ಟರೂ ನಮಗೆ ಕೆಲಸ ಬೇಡ. ಊರಿನ ಕಡೆಗೆ ಹೋಗಬೇಕು. ಇಷ್ಟು ದಿನ ಖಾಲಿ ಹೊಟ್ಟೆಯಲ್ಲಿ ಇದ್ದು ಸಾಕಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮುಖ್ಯಮಂತ್ರಿಗಳು ರಿಯಲ್ ಎಸ್ಟೇಟ್ ಡೆವಲಪರ್ಸ್ ಜೊತೆಗಿನ ಮಾತುಕತೆ ಬಳಿಕ ರೈಲುಗಳನ್ನು ರದ್ದು ಮಾಡಿರುವುದು ಆಘಾತಕಾರಿ ಬೆಳವಣಿಗೆ. ಕಾರ್ಮಿಕರು ಈವರೆಗೆ ವೇತನವಿಲ್ಲದೆ, ದಿನಸಿ ಕಿಟ್ ಸೌಲಭ್ಯ ಎಲ್ಲರಿಗೂ ಸಿಗದೆ ಪರದಾಡಿದ್ದರು. ಸರ್ಕಾರ ಈಗ ರೈಲು ರದ್ದು ಮಾಡುವ ಮೂಲಕ ದೌರ್ಜನ್ಯ ಮಾಡುತ್ತಿದೆ. ಇದು ಕಾರ್ಮಿಕ ನಿಯಮಗಳ ಉಲ್ಲಂಘಟನೆಯಾಗಿದೆ ಎಂದು ನಗರದಲ್ಲಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.