ಬೆಂಗಳೂರು : ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನನ್ನು ವಶಪಡಿಸಿಕೊಳ್ಳುವಂತೆ ಪ್ರತಿಭಟನೆ ನಡೆಸಲಾಯಿತು.
ಮಹದೇವಪುರ ಕ್ಷೇತ್ರದ ರಾಮಗೊಂಡನಹಳ್ಳಿ ಗ್ರಾಮದ ಸರ್ವೇ ನಂ.105/106 ರ ಲಾಫಿಂಗ್ ವಾಟರ್ ಬಡಾವಣೆಗೆ ಅಕ್ರಮ ಮಂಜೂರಾತಿ ನೀಡಿರುವುದನ್ನು ವಿರೋಧಿಸಿ ಹಾಗೂ ಒತ್ತುವರಿಗೊಂಡಿರುವ ಸರ್ಕಾರಿ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕರ್ನಾಟಕ ಪ್ರಜಾ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಯತೀಶ್ ಗೌಡ ಒತ್ತಾಯಿಸಿದರು. ಬೆಂಗಳೂರು ಪೂರ್ವ ತಾಲೂಕು ಕಚೇರಿಗೆ ಕಾರ್ಯಕರ್ತರೊಂದಿಗೆ ಕಾಲ್ನಡಿಗೆ ಮೂಲಕ ಆಗಮಿಸಿ, ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪ್ರಜಾ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಯತೀಶ್ ಗೌಡ, ಕೂಡಲೇ ಭೂ ಕಂದಾಯ ಕಾಯ್ದೆ 1954 ರ ಕಲಂ 96 ರಂತೆ ನೋಟಿಸ್ ನೀಡಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು. ಮುಚ್ಚಿರುವ ಬಂಡಿದಾರಿ ಹಾಗೂ ರಾಜಕಾಲುವೆಗಳನ್ನು ಮುಕ್ತಗೊಳಿಸಬೇಕು. ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನನ್ನು ತೆರವುಗೊಳಿಸಿ ವಶಕ್ಕೆ ತೆಗೆದುಕೊಳ್ಳಬೇಕು. ಈ ಸರ್ವೇ ನಂ. ಗೆ ಸಂಬಂಧಪಟ್ಟಂತೆ ಯಾವುದೇ ಉಪ ನೋಂದಣಿ ಕಚೇರಿಯಲ್ಲಿ ಲೇಔಟ್ ಪ್ಲಾನ್ ನೋಂದಣಿ ಮಾಡಬಾರದು. ಬಿಬಿಎಂಪಿ ಕಚೇರಿಯಲ್ಲಿ ವಗೈರೆ ವಹಿವಾಟು ನಡೆಸಬಾರದು. ಸರ್ಕಾರಿ ಜನೀನುಗಳ ಒತ್ತುವರಿ ತೆರವು ಮಾಡಬೇಕಾಗಿರುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಆಸೆ ಆಮಿಷಗಳಿಗೆ ಬಲಿಯಾಗದೆ ಸರ್ಕಾರಿ ಜಮೀನುಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಬೆ.ಪೂರ್ವ ತಾಲ್ಲೂಕು ತಿಗಳರ ಸಂಘದ ಅಧ್ಯಕ್ಷ ವೇಣು ಗೋಪಾಲ್, ಸುವರ್ಣ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ರಾಘವೇಂದ್ರ ಗೌಡ, ಪ್ರಜಾ ರಕ್ಷಣಾ ಸೇನೆ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎಂ.ವಿ. ಮಂಜುನಾಥ್, ಯುವ ಘಟಕ ರಾಜ್ಯಾಧ್ಯಕ್ಷ ಜ್ಯೋತಿ ಕುಮಾರ್, ಮಹಿಳಾ ಘಟಕ ರಾಜ್ಯಾಧ್ಯಕ್ಷೆ ರಾಧ ಉಮೇಶ್, ಹೊಸಕೋಟೆ ತಾಲ್ಲೂಕು ಅಧ್ಯಕ್ಷೆ ಸುಮತಿ ರೆಡ್ಡಿ, ಮುಖಂಡರಾದ ಡಿಪಿಐ ರಾಜಣ್ಣ, ರಾಮ ಭಕ್ತ ಹೂಡಿ ಮಂಜುನಾಥ್ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.