ಬೆಂಗಳೂರು: ಪ್ಯಾಲೆಸ್ಟೈನ್‌ಗೆ ಬೆಂಬಲಿಸಿ ನಗರದಲ್ಲಿ ನಿನ್ನೆ (ಸೋಮವಾರ) ಸಂಜೆ ನೂರಾರು ಜನರು ದಿಢೀರ್ ಪ್ರತಿಭಟನೆ ನಡೆಸಿದರು. ನಗರದ ಎಂ ಜಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಸೇರಿದ್ದ ನೂರಾರು ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ, ಇಸ್ರೇಲ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ ಪ್ಯಾಲೆಸ್ಟೈನ್‌ಗೆ ಬೆಂಬಲ ನೀಡುವಂತೆ ಆಗ್ರಹಿಸಿದರು. ಪ್ಯಾಲೆಸ್ಟೈನ್ನ ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಗರದಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಪ್ರತಿಭಟನೆಗಳನ್ನು ನಡೆಸುವಂತಿಲ್ಲ. ಆದರೂ ಸಹ ಎಂ.ಜಿ. ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಇದರಿಂದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದಾರೆ. ಇನ್ನು ಕೆಲವರನ್ನು ಕಬ್ಬನ್ ಪಾರ್ಕ್ ಮತ್ತು ಅಶೋಕ ನಗರದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
11 ಮಂದಿ ವಿರುದ್ಧ ಎಫ್ಐಆರ್: ಇನ್ನು ಅನುಮತಿ ಪಡೆಯದೇ ಪ್ರತಿಭಟನೆಗೆ ಕರೆ ನೀಡಿದ್ದ 11 ಮಂದಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೌನ ಪ್ರತಿಭಟನೆ ಕರೆ ನೀಡಿದ್ದ ಬಹುತ್ವ ಕರ್ನಾಟಕ ಸಂಘಟನೆಯ ಕಾರ್ಯಕರ್ತರ ವಿರುದ್ಧ 11 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಂ.ಜಿ.ರಸ್ತೆಯಲ್ಲಿ ಪ್ರತಿಭಟನೆ ನಡೆಸಲು ಅನುಮತಿಯಿಲ್ಲ. ಪ್ರತಿಭಟನೆ ಮಾಡುವುದಿದ್ದರೆ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಬಹುದು. ಆದರೆ, ಪೂರ್ವಾನುಮತಿ ಪಡೆಯದೇ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕಾನೂನು ಉಲ್ಲಂಘನೆ ಕಂಡುಬಂದಿದ್ದರಿಂದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿತ್ತು. ಈ ಸಂಬಂಧ 11 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
2,670 ಪ್ಯಾಲೆಸ್ಟೈನಿಯನ್ನರು ಸಾವು- ಇಸ್ರೇಲ್: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ 10ನೇ ದಿನಕ್ಕೆ ಕಾಲಿಟ್ಟಿದ್ದು, ''ಭೀಕರ ದಾಳಿಯಲ್ಲಿ 2,670 ಪ್ಯಾಲೆಸ್ಟೈನಿಯನ್ನರು ಮೃತಪಟ್ಟಿದ್ದು, 9,600ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಾಳಿ ವೇಳೆ ಆರು ಮಂದಿ ಹಮಾಸ್ ಮುಖಂಡರು ಹತರಾಗಿದ್ದಾರೆ'' ಎಂದು ಇಸ್ರೇಲ್ ನಿನ್ನೆ (ಸೋಮವಾರ) ತಿಳಿಸಿತ್ತು. ಮತ್ತೊಂದೆಡೆ, ಹಮಾಸ್ ಕಡೆಯವರು ಗಡಿ ದಾಟಿ ಬಂದು ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸುತ್ತಿರುವ ಚಿತ್ರ ಹಾಗೂ ವಿಡಿಯೋಗಳನ್ನು ಇಸ್ರೇಲ್ ಹಂಚಿಕೊಂಡಿತ್ತು.
ದಾಳಿಯ ವೇಳೆ ಹಮಾಸ್ನವರೇ ಮಾಡಿದ ವಿಡಿಯೋಗಳನ್ನು ಇಸ್ರೇಲ್ ಪಡೆ ತನ್ನ ಅಧಿಕೃತ 'ಎಕ್ಸ್' ವೇದಿಕೆಯಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋದಲ್ಲಿ ಬಂದೂಕುದಾರಿಗಳು ಇಸ್ರೇಲಿ ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸುತ್ತಿರುವುದನ್ನು ನೋಡಬಹುದು. ಮನೆಗಳಿಗೆ ನುಗ್ಗುವುದು ಹಾಗೂ ಎದುರು ಸಿಕ್ಕ ಜನರ ಮೇಲೆಲ್ಲ ಗುಂಡು ಹಾರಿಸುತ್ತಿರುವುದು ದೃಶ್ಯದಲ್ಲಿದೆ. ಮನೆಯೊಂದರ ಮೇಲೆ ರಾಕೆಟ್ ದಾಳಿ ನಡೆಸಿದ್ದರಿಂದ ಇಡೀ ಮನೆ ಧ್ವಂಸವಾಗಿದ್ದು, ಈ ಮನೆಯು ಪ್ರೀತಿಯಿಂದ ತುಂಬಿತ್ತು. ಆದ್ರೆ, ಹಮಾಸ್ ದಾಳಿಯಿಂದ ಹಾಳು ಕೊಂಪೆಯಾಗಿದೆ ಎಂದು ಬರೆದುಕೊಂಡಿತ್ತು.
ಗಾಜಾದ ಪರಿಸ್ಥಿತಿ: ''ದಕ್ಷಿಣ ಗಾಜಾದ ಕಡೆಗೆ ಜನರು ಸ್ಥಳಾಂತರವಾಗಿದ್ದರಿಂದ ಈ ಭಾಗದಲ್ಲಿ ಆಹಾರ ಮತ್ತು ನೀರಿಗೆ ಹಾಹಾಕಾರ ಉಂಟಾಗಿದೆ'' ಎಂದು ವಿಶ್ವಸಂಸ್ಥೆಯ ಪ್ಯಾಲೆಸ್ಟೈನ್ ನಿರಾಶ್ರಿತರ ಸಂಸ್ಥೆ ತಿಳಿಸಿತ್ತು. ''ಇಲ್ಲಿನ ಶಾಲೆಗಳು ಹಾಗೂ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವ ಜನರ ಸಂಖ್ಯೆಯು ಹೆಚ್ಚಿದೆ. ಜನರಿಗೆ ಸೂಕ್ತ ಸೌಕರ್ಯ ಆಹಾರದ ವ್ಯವಸ್ಥೆ ಇಲ್ಲವಾಗಿದೆ'' ಎಂದು ಹೇಳಿತ್ತು.
ಇದನ್ನೂ ಓದಿ: ವಿದ್ಯುತ್ ಕೊಡದಿದ್ರೆ 1 ಲಕ್ಷ ಹೆಕ್ಟೇರ್ ಭತ್ತದ ಬೆಳೆ ನಾಶ: ಬೆಸ್ಕಾಂ ಎದುರು ರೈತರ ಅಳಲು