ಬೆಂಗಳೂರು: ರಾಷ್ಟ್ರೀಯ ಪಿಂಚಣಿಯ ಹೊಸ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸುವಂತೆ ರಾಜ್ಯ ಸರ್ಕಾರಿ ನೌಕರರು ಒತ್ತಾಯಿಸಿ ನಗರದ ಫ್ರೀಡಂಪಾರ್ಕ್ ಮುಂದೆ ಧರಣಿ ಆರಂಭಿಸಿದ್ದಾರೆ.
ರಾಜ್ಯದ ಒಪಿಎಸ್ ಅಡಿಯಲ್ಲಿ ಲಕ್ಷಾಂತರ ಸರ್ಕಾರಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿ ತಂದಿರುವ ನೂತನ ಪಿಂಚಣಿ ನಿಯಮವನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಈ ಬಗ್ಗೆ ಕಳೆದ ಎಂಟು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಆಳುವ ಸರ್ಕಾರಗಳು ನಮ್ಮ ಬೇಡಿಕೆಗೆ ಮನ್ನಣೆ ನೀಡಿಲ್ಲ ಎಂದು ಕಿಡಿಕಾರಿದರು.
ಈಗಾಗಲೇ ಜಾರ್ಖಂಡ್, ಛತ್ತೀಸ್ಗಡ ಹಾಗೂ ರಾಜಸ್ಥಾನಗಳಲ್ಲಿ NPS ರದ್ದು ಪಡಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಹೊಸ ಪಿಂಚಣಿ ನಿಯಮವನ್ನೇ ಮುಂದುವರೆಸುವ ಮೂಲಕ ನೌಕರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ್ ಆಕ್ರೋಶ ಹೊರಹಾಕಿದ್ದಾರೆ.
ಫ್ರೀಡಂಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ರಾಜ್ಯದ ವಿವಿಧ ಮೂಲೆಗಳಿಂದ ನೌಕರರು ಬರುತ್ತಿರುವುದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಾಗಿದೆ. ಆನಂದ್ ರಾವ್ ಸರ್ಕಲ್, ಶೇಷಾದ್ರಿ ರಸ್ತೆ, ಗಾಂಧಿನಗರ ಸೇರಿದಂತೆ ಹಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಭಾರಿ ಸಮಸ್ಯೆ ಎದುರಾಗಿದೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನ.. ಜಿದ್ದಾಜಿದ್ದಿನ ಕಲಾಪಕ್ಕೆ ವೇದಿಕೆ ಸಜ್ಜು, ಪ್ರಮುಖ ವಿಧೇಯಕಗಳ ಮಂಡನೆ