ಬೆಂಗಳೂರು: ರಾಜ್ಯ ಸರ್ಕಾರ ಭೂ ಸುಧಾಕರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕೈಗಾರಿಕಾ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳನ್ನು ವಿರೋಧಿಸಿ ನಾವು ನಾಳೆಯಿಂದ ರಾಜ್ಯಾದ್ಯಂತ ಹೋರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನಾಳೆಯಿಂದಲೇ ರಾಜ್ಯಾದ್ಯಂತ ಹೋರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ನಾಳೆ ಹಾಸನದಲ್ಲಿ ಸಾಂಕೇತಿಕವಾಗಿ ಹೋರಾಟಕ್ಕೆ ಚಾಲನೆ ನೀಡಲಿದ್ದೇವೆ ಎಂದು ಹೇಳಿದರು.
ಹಾಸನ ಜಿಲ್ಲೆಯ ಎಲ್ಲಾ ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. 200 ಜನ ಮಾತ್ರ ಸೇರಿ ಪ್ರತಿಭಟನೆ ಮಾಡುತ್ತೇವೆ. ಘೋಷಣೆಗಳನ್ನು ಕೂಗುವುದಿಲ್ಲ. ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗೆ ಮನವಿ ಕೊಡುತ್ತೇವೆ ಎಂದರು.
ನಮ್ಮ ಪಕ್ಷದಲ್ಲಿ ಒಡಕಿಲ್ಲ:
ನಮ್ಮ ಪಕ್ಷದಲ್ಲಿ ಈ ಹೋರಾಟದ ಬಗ್ಗೆ ಯಾವುದೇ ಒಡಕಿಲ್ಲ. ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ. ಸರ್ಕಾರ ತಿದ್ದುಪಡಿ ಮಾಡಿ ತಂದಿರುವ ಮೂರು ಕಾಯ್ದೆಗಳಿಗೆ ನಮ್ಮ ಸಮ್ಮತಿ ಇಲ್ಲ. ಈ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಅನುಷ್ಠಾನಕ್ಕೆ ತಂದಿದ್ದಾರೆ. ಇದನ್ನು ವಿರೋಧಿಸಲು ರಾಜ್ಯಾದ್ಯಂತ ಹೋರಾಟ ಮಾಡಲು ನಾವು ಸಿದ್ಧವಾಗಿದ್ದೇವೆ. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕೈಗಾರಿಕಾ ಕಾಯ್ದೆ ತಿದ್ದುಪಡಿಗೆ ನಮ್ಮ ವಿರೋಧ ಇದೆ. ಈ ಸಂಬಂಧ ರಾಜ್ಯಾದ್ಯಂತ ನಾಳೆಯಿಂದ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ನಾಳೆ ಪ್ರತಿಭಟನೆಗೆ ಹಾಸನದಲ್ಲಿ ಇದಕ್ಕೆ ಚಾಲನೆ ಕೊಡುತ್ತೇವೆ. ಕೊರೊನಾ ಮಾರ್ಗಸೂಚಿ ನಿಯಮದ ಅನ್ವಯವೇ ಹೋರಾಟ ಮಾಡುತ್ತೇವೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸೇರಿದಂತೆ ಬೆರಳೆಣಿಕೆ ಮಂದಿ ಮಾತ್ರ ಶಾಂತಿಯುತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ. ಒಂದು ಕಡೆ ಕುಳಿತುಕೊಂಡು ಪ್ರತಿಭಟನೆ ಮಾಡುತ್ತೇವೆ. ಐದಾರು ಜನ ಮುಖಂಡರು ಡಿಸಿಗೆ ಮನವಿ ಕೊಡುತ್ತೇವೆ. 30 ಜಿಲ್ಲೆಗಳಲ್ಲಿ ಈ ಹೋರಾಟ ಹಂತ ಹಂತವಾಗಿ ಮಾಡುತ್ತೇವೆ ಎಂದರು.
ಮೂವತ್ತು ಜಿಲ್ಲೆಗೆ ನಾನೇ ಹೋಗುವುದಕ್ಕೆ ಆಗುವುದಿಲ್ಲ. ರಾಜ್ಯಾಧ್ಯಕ್ಷರು, ಆಯಾ ಭಾಗದ ಶಾಸಕರು, ಮಾಜಿ ಶಾಸಕರು, ಪರಿಷತ್ ಸದಸ್ಯರು ಜಿಲ್ಲೆಗಳಲ್ಲಿ ಹೋರಾಟ ಮಾಡುತ್ತಾರೆ. ವಾರದಲ್ಲಿ 30 ಜಿಲ್ಲೆಗಳಲ್ಲಿ ಹೋರಾಟ ಮಾಡುತ್ತೇವೆ. ಮಾಜಿ ಸಿಎಂ ಕುಮಾರಸ್ವಾಮಿ, ನಾನು, ರಾಜ್ಯಾಧ್ಯಕ್ಷರು ಹೋರಾಟದ ಮುಂಚೂಣಿಯಲ್ಲಿ ಭಾಗವಹಿಸಲಿದ್ದೇವೆ. ಎಪಿಎಂಸಿ ಕಾಯ್ದೆಯಿಂದ ರೈತರ ಸ್ಥಿತಿ ಚಿಂತಾಜನಕವಾಗಲಿದೆ. ಸಂಸತ್ನಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇನೆ. ಉಳಿದ ಕಾಯ್ದೆ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಹೀಗಾಗಿ ಇಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ವಿವರಿಸಿದರು.
ಪ್ರವಾಹದಿಂದ ದೊಡ್ಡ ಹಾನಿ:
ರಾಜ್ಯದಲ್ಲಿನ ಪ್ರವಾಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೌಡರು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೊಡಗಿಗೆ ಹೋಗಿ ನೋಡಿಕೊಂಡು ಬಂದಿದ್ದಾರೆ. ಪ್ರವಾಹದಿಂದ ದೊಡ್ಡ ಪ್ರಮಾಣದ ಹಾನಿ ಆಗಿದೆ. ರೈತರ ಬೆಳೆ ನಷ್ಟ ಆಗಿದೆ. ಮನುಷ್ಯರು, ಪ್ರಾಣಿಗಳು, ವಾಹನಗಳು ಕೊಚ್ಚಿ ಹೋಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹದ ಕುರಿತು ಮಂತ್ರಿಗಳ ಜೊತೆ ಸಭೆ ಮಾಡಿದ್ದಾರೆ. ಅದರಿಂದ ನನಗೆ ತೃಪ್ತಿ ಆಗಿಲ್ಲ ಎಂದರು.
ಕೇಂದ್ರದ ತಂಡ ಕಳುಹಿಸಿ:
ಪ್ರತಿ ಜಿಲ್ಲೆ, ತಾಲೂಕಿಗೆ ಹೋಗಿ ನಮ್ಮ ಅಧಿಕಾರಿಗಳು ನಷ್ಟದ ಬಗ್ಗೆ ವರದಿ ನೀಡಬೇಕು. ಕೇಂದ್ರ ಸರ್ಕಾರ ಶೀಘ್ರವೇ ರಾಜ್ಯಕ್ಕೆ ತಂಡ ಕಳಿಸಿ ಸಮೀಕ್ಷೆ ಮಾಡಿಸಬೇಕು. ಕೇಂದ್ರ ತಂಡ ಪರಿಶೀಲನೆ ಮಾಡಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಕಡೆಗಣಿಸಬಾರದು ಎಂದು ಒತ್ತಾಯಿಸಿದ ಅವರು, ಕಳೆದ ಬಾರಿ ಪ್ರವಾಹ ಪರಿಹಾರದಲ್ಲಿ ನಮಗೆ ಅನ್ಯಾಯ ಆಗಿದೆ. ಈ ಬಾರಿ ಹಾಗೆ ಆಗಬಾರದು. ನಾನು ಈ ಬಗ್ಗೆ ಸಂಸತ್ನಲ್ಲಿ ಮಾತಾಡುತ್ತೇನೆ ಎಂದು ಹೇಳಿದರು.