ಬೆಂಗಳೂರು: ನ್ಯಾಯಾಂಗ ವ್ಯವಸ್ಥೆ ಹಾಗೂ ನ್ಯಾಯದಾನ ಪ್ರಕ್ರಿಯೆಯಲ್ಲಿ ಪ್ರಾಸಿಕ್ಯೂಷನ್ ಇಲಾಖೆ ಕೆಲಸ ಅತ್ಯಂತ ಗಮನಾರ್ಹವಾದುದು. ಆದರೆ, ಈ ಇಲಾಖೆಗೆ ಕಳೆದ 24 ವರ್ಷಗಳಿಂದ ನೇಮಕಾತಿಯೇ ನಡೆದಿಲ್ಲ ಎಂಬ ಆತಂಕಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಓದಿ: ಬೆಳಗಾವಿ ಉಪಚುನಾವಣೆಗೆ ನಾನೂ ಟಿಕೆಟ್ ಆಕಾಂಕ್ಷಿ: ಪ್ರಮೋದ ಮುತಾಲಿಕ್
ಸರ್ಕಾರದ ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಕಾರ್ಯ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಎಷ್ಟೇ ಶ್ರಮಪಟ್ಟರೂ ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ಪಾತ್ರ ನಿರ್ಣಾಯಕವಾಗಿರುತ್ತದೆ. ಇಂತಹ ಇಲಾಖೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ, ಇಲಾಖೆಗೆ ಕಳೆದ 24 ವರ್ಷಗಳಿಂದ ನೇಮಕಾತಿಯೇ ನಡೆದಿಲ್ಲ.
ಪ್ರಾಸಿಕ್ಯೂಷನ್ ಇಲಾಖೆಗೆ ಒಟ್ಟು 1410 ಸಿಬ್ಬಂದಿ ಮಂಜೂರಾಗಿದೆ. ಆದರೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕೇವಲ 290 ಮಾತ್ರ. ಪ್ರಸ್ತುತ 1120 ಹುದ್ದೆಗಳು ಖಾಲಿ ಉಳಿದಿದ್ದು, ಈ ಸ್ಥಾನಗಳಿಗೆ ಕೇವಲ 600 ಮಂದಿಯನ್ನು ಮಾತ್ರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. 2020 ರಿಂದ ಗುತ್ತಿಗೆ ನೌಕರರನ್ನೂ ನೇಮಿಸಿಕೊಂಡಿಲ್ಲ. ಹೀಗಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ಗಳು ತಮ್ಮ ಕೆಲಸಕ್ಕೆ ಅಗತ್ಯ ನೆರವಿಲ್ಲದೆ ನಿತ್ಯವೂ ಮಾನಸಿಕ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಧಾನ ಸರ್ಕಾರಿ ಅಭಿಯೋಜಕರಾದ ಚನ್ನಪ್ಪ ಜಿ. ಹರಸೂರ ಅವರು ಹೇಳುವಂತೆ ಜಿಲ್ಲಾ ನ್ಯಾಯಾಧೀಶರ ಕರ್ತವ್ಯಕ್ಕೆ ಕನಿಷ್ಠ 18 ರಿಂದ 20 ಮಂದಿ ಸಿಬ್ಬಂದಿ ನೆರವು ನೀಡುತ್ತಾರೆ. ಆದರೆ, ಪಿಪಿಗಳಿಗೆ ಸಿಬ್ಬಂದಿಯೇ ಇಲ್ಲ. ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಅಭಿಯೋಜನೆ ಪರ ವಕಾಲತ್ತು ವಹಿಸುವ ಓರ್ವ ಪಿಪಿ ಅಥವಾ ಎಪಿಪಿಗೆ ನಿಯಮಾನುಸಾರ ಕನಿಷ್ಠ ಒಬ್ಬ ಕ್ಲರ್ಕ್, ಟೈಪಿಸ್ಟ್, ಸ್ಟೆನೋ, ಆಫೀಸ್ ಸೂಪರಿಂಟೆಂಡೆಂಟ್, ಪ್ಯೂನ್ ಸೇರಿ ಒಟ್ಟು 5 ಮಂದಿ ಸಿಬ್ಬಂದಿ ನೀಡಬೇಕು. ಆದರೆ ನಮ್ಮಲ್ಲಿ 5 ಮಂದಿ ಪಿಪಿ ಅಥವಾ ಎಪಿಪಿಗಳಿಗೆ ಓರ್ವ ಟೈಪಿಸ್ಟ್ ಹಾಗೂ ಸ್ಟೆನೋಗಳಿದ್ದಾರೆ.
ಇನ್ನು, ಪ್ಯೂನ್ ಗಳ ಕೊರತೆ ವಿಪರೀತ ಇದ್ದು, ಎಷ್ಟೋ ಬಾರಿ ಈ ಕೆಲಸಕ್ಕೆ ಪೊಲೀಸ್ ಕಾನ್ಸಟೆಬಲ್ಗಳನ್ನೇ ಬಳಸಿಕೊಳ್ಳುತ್ತೇವೆ. ಪ್ಯೂನ್ಗಳ ಕೈಯಲ್ಲಿ ಕಳುಹಿಸಬೇಕಾದ ಕಡತಗಳನ್ನು ಕಾನ್ಸಟೇಬಲ್ಗಳ ಮೂಲಕ ಕಳುಹಿಸುವ ಮತ್ತು ತರಿಸಿಕೊಳ್ಳುವ ಕೆಲಸ ಮಾಡಿಸಿಕೊಳ್ಳುತ್ತಿದ್ದೇವೆ. ಇವೆಲ್ಲದರಿಂದಾಗಿ ಪಿಪಿ ಮತ್ತು ಎಪಿಪಿಗಳು ಅತ್ಯಂತ ಮಾನಸಿಕ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಒಟ್ಟಾರೆ ನಮ್ಮದು ಅತ್ಯಂತ ನಿರ್ಲಕ್ಷಿತ ಇಲಾಖೆ ಎಂದು ಚನ್ನಪ್ಪ ಬೇಸರದಿಂದ ಹೇಳುತ್ತಾರೆ.
ಇಲಾಖೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ಕೊರತೆ ಕೂಡ ಗಣನೀಯವಾಗಿದೆ. 26 ಪಿಪಿ, 63 ಹಿರಿಯ ಎಪಿಪಿ, ಹಾಗೂ 253 ಎಪಿಪಿ ಹುದ್ದೆಗಳು ಖಾಲಿ ಉಳಿದಿವೆ. ಇಷ್ಟಲ್ಲದೇ ಕಳೆದ ಮೂರ್ನಾಲ್ಕು ವರ್ಷಗಳಿಂದ 25 ಕ್ಕೂ ಅಧಿಕ ಸೆಷನ್ಸ್ ಕೋರ್ಟಗಳು ಹಾಗೂ 50 ಕ್ಕೂ ಹೆಚ್ಚು ಜೆಎಂಎಫ್ ಸಿ ಕೋರ್ಟ್ ಗಳನ್ನು ಸ್ಥಾಪಿಸಲಾಗಿದ್ದು ಇಲ್ಲಿ ಕಾರ್ಯ ನಿರ್ವಹಿಸಲು ಒಂದೇ ಒಂದು ಪಿಪಿ ಅಥವಾ ಎಪಿಪಿ ಹುದ್ದೆ ಸೃಷ್ಟಿಸಿಲ್ಲ.
ಬದಲಿಗೆ ಇರುವವರಿಗೇ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ, ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ ಅಭಿಯೋಜಕರು ಹೇಳುವಂತೆ ಸರ್ಕಾರ ಪ್ರಾಸಿಕ್ಯೂಷನ್ ಇಲಾಖೆಯನ್ನು ನಿರ್ಲಕ್ಷ್ಯಿಸಿರುವುದಂತೂ ಸ್ಪಷ್ಟ. ಈ ನಿಟ್ಟಿನಲ್ಲಿ ಸರ್ಕಾರ ಇಲಾಖೆಯನ್ನು ನಿರ್ಲಕ್ಷ್ಯ ಮಾಡದೆ ಅಗತ್ಯಾನುಸಾರ ಎಪಿಪಿ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ನ್ಯಾಯದಾನ ಪ್ರಕ್ರಿಯೆಯನ್ನು ಬಲಿಷ್ಠಗೊಳಿಸಬೇಕಿದೆ.