ಬೆಂಗಳೂರು: ಮಾಧ್ಯಮಗಳಿಗೆ ಸದನದೊಳಗೆ ನಿರ್ಬಂಧ ಹೇರಿಕೆ ಹಾಗೂ ನೆರೆ ಪರಿಹಾರ ವಿತರಣೆ ಸಂಬಂಧ ಕಾಂಗ್ರೆಸ್ ನಾಯಕರು ಆಡಳಿತ ಪಕ್ಷವನ್ನು ಸದನದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೇಲ್ಮನೆಯಲ್ಲಿ ಅತಿವೃಷ್ಠಿ ವಿಚಾರ ಪ್ರಸ್ತಾಪಿಸಿದ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸುದೀರ್ಘವಾಗಿ ಭಾಷಣ ಮಾಡಿ, 118 ವರ್ಷದಲ್ಲೇ ಕಂಡು ಕೇಳರಿಯದಂತಹ ಅತಿವೃಷ್ಟಿ ಉಂಟಾಗಿದೆ. 195 ಗ್ರಾಮಗಳು ಮುಳುಗಡೆಯಾಗಿ ಅಪಾರ ಹಾನಿಯಾಗಿದೆ. 1.80 ಲಕ್ಷ ಮನೆಗಳು ಬಿದ್ದು ಹೋಗಿದೆ. 22 ಜಿಲ್ಲೆಯ 103 ತಾಲೂಕಿನಲ್ಲಿ ಅತಿವೃಷ್ಠಿಯಿಂದ ಭಾರೀ ತೊಂದರೆಯಾಗಿದೆ. 22 ಲಕ್ಷ 22 ಸಾವಿರ ಎಕರೆ ಬೆಳೆ ಹಾನಿಯಾಗಿದೆ. ಜನರು ಮನೆ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಜೀವನ ಸಾಗಿಸುವಂತಾಗಿದೆ. ಪ್ರವಾಹದ ದುಷ್ಪರಿಣಾಮ ಭಾರೀ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳು ನಾಶವಾಗಿದೆ. ದಾಳಿಂಬೆ ಬೆಳೆ ಹಾಳಾಗಿದೆ. ಸರ್ಕಾರದಿಂದ ಒಂದು ಎಕರೆಗೆ 13 ಸಾವಿರ ಪರಿಹಾರ ನೀಡುತ್ತಿದ್ದಾರೆ. ಈ ಅಲ್ಪ ಮೊತ್ತ ಯಾವುದಕ್ಕೂ ಸಾಲದಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಧ್ಯಮಗಳ ಪ್ರವೇಶ ನಿಷೇಧ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ಸಿಗರು, ಮಾಧ್ಯಮಗಳಿಗೆ ಸದನದೊಳಗೆ ಪ್ರವೇಶ ನಿರಾಕರಿಸಿರುವುದು ಸರಿಯಲ್ಲ. ಮಾಧ್ಯಮಗಳಿಗೆ ಪ್ರವೇಶ ನೀಡಬೇಕು ಎಂದು ಎಸ್.ಆರ್.ಪಾಟೀಲ್ ಸೇರಿದಂತೆ ಇತರ ನಾಯಕರು ಆಗ್ರಹಿಸಿದರು. ಆದರೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ನಂತರ ಕಾಲಾವಕಾಶ ನೀಡಲಾಗುವುದು ಎಂದು ಸೂಚಿಸಿದರು.
ರಾಜ್ಯದ 22 ಜಿಲ್ಲೆಗಳಲ್ಲಿ 59,598 ವಿದ್ಯುತ್ ಕಂಬಗಳು ಹಾನಿಯಾಗಿದೆ. 14,098 ಟ್ರಾನ್ಸ್ ಫಾರ್ಮರ್‌ಗಳು ಹಾಳಾಗಿದೆ. ಇದರಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೂಕ್ತ ವಿದ್ಯುತ್ ಪೂರೈಸಲು ಸಾಧ್ಯವಾಗ್ತಿಲ್ಲ. ನಿರೀಕ್ಷೆಗೆ ಮೀರಿ ಮಳೆಯಾಗಿ ಜನರು ತೊಂದರೆ ಪಡುತ್ತಿದ್ದಾರೆ. ಭೀಮಾ, ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆಯಾಗಿದೆ. ಹಲವು ಕಡೆಗಳಲ್ಲಿ ಗಂಜಿ ಕೇಂದ್ರಗಳು ಬಂದ್ ಆಗಿವೆ. ಸಾವಿರಾರು ಕೋಟಿ ರೂಪಾಯಿ ನಷ್ಠವಾಗಿದೆ, 10,888 ಸರ್ಕಾರಿ ಶಾಲೆ ಕಟ್ಟಡ, ಪಂಚಾಯ್ತಿ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ನಾಶವಾಗಿದೆ. ಅತಿವೃಷ್ಠಿ ಹಾನಿ ಬಗ್ಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಎಸ್.ಆರ್.ಪಾಟೀಲ್ ಹೇಳಿದಾಗ ನಿಯಮ 59ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸುವಂತೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.
ನಿಯಮ 59 ಕ್ಕೆ ಬದಲಾಗಿ ನಿಯಮ 60 ರ ಅಡಿ ಚರ್ಚೆಗೆ ಅವಕಾಶ ನೀಡಿದರೆ ಉತ್ತಮ. ರಾಜ್ಯ ಸರ್ಕಾರದಿಂದ ಹಾನಿಗೊಳಗಾದ ಸ್ಥಳದಲ್ಲಿ ಪರಿಹಾರ ಕಾರ್ಯ ಭರದಿಂದ ಸಾಗಿದೆ. ರಾಜ್ಯದ 22 ಜಿಲ್ಲೆಗಳ103 ತಾಲೂಕುಗಳಲ್ಲಿ ನೆರೆ ಹಾನಿಯಾಗಿದೆ. ರಾಜ್ಯ ಸರ್ಕಾರ 294 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ 1,200 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸದನಕ್ಕೆ ಮಾಹಿತಿ ನೀಡಿದರು.
ಸರ್ಕಾರದ ಉತ್ತರವೇನು?
ಶೇ.50 ರಿಂದ 75 ರಷ್ಟು ಮನೆ ಹಾನಿಯಾದ 42,850 ಮನೆಗಳಿಗೆ ಒಂದು ಲಕ್ಷ ಬದಲಿಗೆ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಶೇ.15 ರಿಂದ 20 ರಷ್ಟು ಮನೆ ಹಾನಿಯಾದ 77,515 ಮನೆಗಳಿಗೆ 25 ಸಾವಿರ ನೀಡಲು ನಿರ್ಧರಿಸಲಾಗಿತ್ತು. ಈಗ 50 ಸಾವಿರ ರೂ. ನೀಡಲು ತೀರ್ಮಾನಿಸಲಾಗಿದೆ. ನೀರು ನುಗ್ಗಿ ಮನೆಯ ಸಾಮಾನು ಸರಂಜಾಮು ಹಾಳಾದ ಮನೆಗಳಿಗೆ 10 ಸಾವಿರ ರೂ. ನೀಡಲಾಗ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನ ಪರಿಷತ್ ನಲ್ಲಿ ಹೇಳಿದರು.
ಮನೆ ದಾಖಲಾತಿ ಇಲ್ಲದವರಿಗೆ ಪರಿಹಾರ ಸಿಗ್ತಾ ಇಲ್ಲ ಅನ್ನೋ ಪ್ರತಿಪಕ್ಷದವರ ಆರೋಪ ಸುಳ್ಳು. ದಾಖಲೆಗಳಿಲ್ಲದೆ ಅನಧಿಕೃತವಾಗಿ ಕಟ್ಟಿದ ಮನೆ ಸಂಪೂರ್ಣವಾಗಿ ನಾಶವಾದ್ರೆ ಸಾಕು. ಈ ಹಿಂದೆ ಅಲ್ಲಿ ಮನೆಯಿದ್ದ ಬಗ್ಗೆ ಸಾಕ್ಷಿ ಸಿಕ್ಕರೆ ಅವರಿಗೂ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ. ನೀಡುತ್ತಿದ್ದೇವೆ. ನಾನೂ ರೈತ ಕುಟುಂಬದ ಹಿನ್ನಲೆಯುಳ್ಳವನು. ನಮಗೂ ರೈತರ ಸಂಕಷ್ಠದ ಅರಿವಿದೆ. ಈ ಸಂದರ್ಧಲ್ಲಿ ಆಡಳಿತ- ಪ್ರತಿಪಕ್ಷದವರು ಕೂಡಿ ಕೆಲಸ ಮಾಡೋಣ. ನೆರೆ ಪರಿಹಾರ ಕಾರ್ಯದಲ್ಲಿ ಲೋಪವಾದರೆ ಸರ್ಕಾರಕ್ಕೆ ವಿಪಕ್ಷದವರು ತಿಳಿ ಹೇಳಿ. ನಗರದಲ್ಲಿ ಶೇ.25 ರಷ್ಟು ಮೂಲ ಬೆಂಗಳೂರಿಗರು. ಉಳಿದವರು ರಾಜ್ಯದ ನಾನಾ ಭಾಗಗಳಿಂದ ಬಂದವರು ಎಂದು ಅಶೋಕ್ ಹೇಳಿದರು.