ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಹಾಗೂ ಕವಿ ನಿಸಾರ್ ಅಹಮದ್ ಅವರ ಒಡನಾಟ ತೀರ ಹತ್ತಿರವಿತ್ತು. ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಇದರ ಜೊತೆಗೆ ನಿಮಗೆ ಗೊತ್ತಿಲ್ಲದ ಒಂದು ಕುತೂಹಲಕಾರಿ ಸಂದರ್ಭ ಇಲ್ಲಿದೆ.
ರಾಜ್ ಕುಮಾರ್ ಅವರಿಗೆ ಮಾಂಸಾಹಾರ ಊಟ ಎಷ್ಟು ಇಷ್ಟ ಎನ್ನುವುದನ್ನು ನಿಸಾರ್ ಅಹಮದ್ ವೇದಿಕೆಯಲ್ಲೊಮ್ಮೆ ಹಂಚಿಕೊಂಡಿದ್ದರು.
ಒಮ್ಮೆ ನಿಸಾರ್ ಅಹಮದ್ ಅವರು ತಮ್ಮ ಮನೆಗೆ ಊಟಕ್ಕೆ ಬರುವಂತೆ ರಾಜ್ ಕುಮಾರ್ ಹಾಗೂ ಪತ್ನಿ ಪಾರ್ವತಮ್ಮ ಅವರನ್ನು ಆಹ್ವಾನಿಸಿದ್ದರಂತೆ. ನಿಸಾರ್ ಅವರ ಪತ್ನಿ ಮಾಡಿದ್ದ ಬಿರಿಯಾನಿಯನ್ನು ರಾಜಕುಮಾರ್ ಹಾಗೂ ಪಾರ್ವತಮ್ಮ ಇಬ್ಬರು ಬಹಳ ಇಷ್ಟಪಟ್ಟು ಸವಿದಿದ್ದರು. ಪಾರ್ವತಮ್ಮನವರು ಊಟ ಮುಗಿದ ಕೂಡಲೇ ಕೈತೊಳೆದುಕೊಂಡರು. ಆದರೆ, ರಾಜಕುಮಾರ್ ಅವರು ಕೈತೊಳೆಯಲು ಹಿಂದೆ-ಮುಂದೆ ನೋಡುತ್ತಿದ್ದರಂತೆ. ಈ ಬಗ್ಗೆ ಪಾರ್ವತಮ್ಮನವರು ಕೇಳಿದಾಗ ಕೈ ತೊಳೆದರೆ ಬಿರಿಯಾನಿ ವಾಸನೆ ಹೋಗುತ್ತದೆ. ಹೀಗಾಗಿ, ಕೈತೊಳೆಯಲು ಮನಸ್ಸಾಗುತ್ತಿಲ್ಲ ಎಂದಿದ್ದರಂತೆ!.
ಪ್ರತಿಬಾರಿಯೂ ರಾಜ್ ಕುಮಾರ್ ಅವರು ನಿಸಾರ್ ಅವರನ್ನು ತುಂಬಾ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದಂತೆ. ಒಮ್ಮೊಮ್ಮೆ ಅವರ ಮನೆಗೂ ಅಕ್ಕಪಕ್ಕದ ಮನೆಯವರಿಗೆ ತಿಳಿಯದಂತೆ ರಾಜಕುಮಾರ್ ಬಂದು ಹೋಗುತ್ತಿದ್ದರು. ಆದರೆ ಅಕ್ಕಪಕ್ಕದ ಮನೆಯವರು ನಮಗೆ ಯಾಕೆ ತಿಳಿಸಲಿಲ್ಲ ನೀವು ಎಂದು ಹೇಳುತ್ತಿದ್ದರಂತೆ. ಇದನ್ನೆಲ್ಲಾ ಸ್ವತಃ ನಿಸಾರ್ ಅವರು, ಕಳೆದ ವರ್ಷ ನಡೆದ ರಾಜಕುಮಾರ್ ಜಯಂತಿ ಕಾರ್ಯಕ್ರಮದಲ್ಲಿ ಮೆಲುಕು ಹಾಕಿದ್ದಾರೆ.
ನಿಸಾರ್ ಕುಟುಂಬ ಹಾಗೂ ರಾಜ್ ಕುಮಾರ್ ಅವರ ಕುಟುಂಬ ಇಂದಿಗೂ ಅದೇ ಆತ್ಮೀಯತೆಯನ್ನು ಉಳಿಸಿಕೊಂಡು ಬಂದಿದೆ. ಪುನೀತ್ ರಾಜಕುಮಾರ್ ಅವರು ನಿಸಾರ್ ಅವರ ಆರೋಗ್ಯವನ್ನು ಹೆಚ್ಚು ವಿಚಾರಿಸುತ್ತಿದ್ದರು.