ಬೆಂಗಳೂರು : ದೇಶೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳ ಪಾಲುದಾರಿಕೆಯಲ್ಲಿ ಕರ್ನಾಟಕ ಸರ್ಕಾರ ಜಾಗತಿಕ ಆವಿಷ್ಕಾರ ಮೈತ್ರಿಯನ್ನು ರೂಪಿಸುವ ಪ್ರಕ್ರಿಯೆಯಲ್ಲಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ಮತ್ತು ರೋಟರಿ ಜಂಟಿಯಾಗಿ ಆಯೋಜಿಸಿದ್ದ ‘ಬೆಂಗಳೂರು ಉದ್ಯಮ ಸಮ್ಮೇಳನ’ವನ್ನು ಇಂದು ಉದ್ಘಾಟಿಸಿ ಮಾತನಾಡಿದ ಅವರು ವಲಯವಾರು ಕಾರಿಡಾರ್‌ಗಳನ್ನು ರಚಿಸುವ ಬಗ್ಗೆ ರಾಜ್ಯ ಸರ್ಕಾರವು ಆಸ್ಟ್ರೇಲಿಯಾ, ಜರ್ಮನಿ, ಇಸ್ರೇಲ್ ಮುಂತಾದ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಈ ವಿಧಾನವು ಸಂಪೂರ್ಣವಾಗಿ ವಲಯ ಚಾಲಿತವಾಗಿದೆ ಎಂದರು.
ಕರ್ನಾಟಕವು ದೇಶದ ‘ಸಂಶೋಧನೆ ಮತ್ತು ಆವಿಷ್ಕಾರ ಕೇಂದ್ರ’ ವಾಗಲು ಪ್ರಯತ್ನಗಳನ್ನು ನಡೆಸುತ್ತಿದೆ. ಪದವಿಗಳಿಸಿ ಕಂಪನಿಯ ಬ್ಯಾಕ್ ಆಫೀಸ್ ಕೆಲಸದಿಂದ ಹಿಡಿದು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕವು ಈಗಾಗಲೇ 400 ಕ್ಕೂ ಹೆಚ್ಚು ಫಾರ್ಚೂನ್ 500 ಕಂಪನಿಗಳಿಗೆ ನೆಲೆಯಾಗಿದೆ ಮತ್ತು ಅಗ್ರ ಹೂಡಿಕೆಯ ತಾಣವಾಗಿದೆ. ಬೆಂಗಳೂರಿನ ಚಿಕ್ಕಪೇಟೆ, ಸುಲ್ತಾನಪೇಟೆ, ತರಗುಪೇಟೆ ಮುಂತಾದ ವಿವಿಧ ಕ್ಲಸ್ಟರ್‌ಗಳನ್ನು ಹೊಂದಿರುವ ವಿಶೇಷ ಆರ್ಥಿಕ ವಲಯವಾಗಿದೆ. ಒಟ್ಟಿನಲ್ಲಿ ರಾಜ್ಯವು ಆರ್ಥಿಕ ಶಕ್ತಿ ಕೇಂದ್ರವಾಗಿದೆ. ಇದು ಆಕಸ್ಮಿಕವಾಗಿರದೆ ವ್ಯವಸ್ಥಿತ ರಚನೆಯಾಗಿದೆ. ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲ್ಲು ಸೂಕ್ತವಾದ ಪರಿಸರ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ರಚಿಸುತ್ತಿದೆ ಎಂದು ಸಚಿವರು ತಿಳಿಸಿದರು.
ಕೇಂದ್ರ ಸರ್ಕಾರದ 'ಆತ್ಮ ನಿರ್ಭರ ಭಾರತ್' ಅಭಿಯಾನವನ್ನು ಪರೋಕ್ಷವಾಗಿ ಟೀಕಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕ ರಾಜ್ಯವು ಹಿಂದಿನಿಂದಲೂ ಸ್ವಾವಲಂಬಿಯಾಗಿದೆ, ಶ್ರೇಷ್ಠ ಆಡಳಿತ, ಪ್ರತಿಭಾನ್ವಿತರು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು, ಸಾರ್ವಜನಿಕ ವಲಯ ಸಂಸ್ಥೆಗಳು, ವೈಜ್ಞಾನಿಕ ಮತ್ತು ಬ್ಯಾಂಕಿಂಗ್ ಸೇರಿದಂತೆ ಹಲವು ವಲಯಗಳು ಸಾಕಷ್ಟು ಇವೆ. ಕರ್ನಾಟಕವು ಅತಿ ಹೆಚ್ಚು ಪದವೀಧರರ ಕೆಲಸದ ಪಡೆಯನ್ನು ಹೊಂದಿದೆ ಎಂದು ಪ್ರಿಯಾಂಕ್ ಖರ್ಗೆ ನುಡಿದರು.
ರಾಜ್ಯವು ತೆಲಂಗಾಣ ಅಥವಾ ಭಾರತದ ಯಾವುದೇ ರಾಜ್ಯದೊಂದಿಗೆ ಸ್ಪರ್ಧಿಸುತ್ತಿಲ್ಲ. ಅದರ ಸ್ಪರ್ಧೆ ಇರುವುದು ಚೀನಾದೊಂದಿಗೆ. ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹರಿದು ಬರುತ್ತಿದ್ದು, ಆವಿಷ್ಕಾರ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ. ಸೇವೆಗಳ ರಫ್ತಿನಲ್ಲಿ, ಎಲೆಕ್ಟ್ರಾನಿಕ್ಸ್ ವಿನ್ಯಾಸದಲ್ಲಿ ಮೊದಲ ಸ್ಥಾನದಲ್ಲಿದೆ. ದೇಶದ ವಿದೇಶಿ ನೇರ ಹೂಡಿಕೆಯಲ್ಲಿ ರಾಜ್ಯದ ಪ್ರಮಾಣ ಶೇಕಡಾ 38 ರಷ್ಟಿದೆ.
ಎಫ್‌ಐಸಿಸಿಐ ಅಧ್ಯಕ್ಷ ಉಲ್ಲಾಸ್ ಕಾಮತ್, ಮಾನವರಹಿತ ವೈಮಾನಿಕ ವಾಹನಗಳಿಗೆ ಕ್ಲಸ್ಟರ್ ಮತ್ತು ಡ್ರೋನ್ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯವು ಅಂತರಿಕ್ಷಯಾನ ಮತ್ತು ರಕ್ಷಣಾ ಕೇಂದ್ರವಾಗಿದ್ದು, ಈ ವಲಯಗಳ ಉತ್ಪಾದನೆಯಲ್ಲಿ ಸುಮಾರು ಶೇಕಡಾ 65 ರಷ್ಟು ಕೊಡುಗೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು.
ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ ಮಾತನಾಡಿ, ಕೃಷಿಯನ್ನು ಮತ್ತಷ್ಟು ರೂಪಾಂತರಗೊಳಿಸುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಮತ್ತು ರಾಜ್ಯದಲ್ಲಿ ತಾಂತ್ರಿಕ ಪ್ರಗತಿಯ ಮಹತ್ವ, ಕೃಷಿಯ ಮೇಲೆ ಅದರ ಪ್ರಭಾವವನ್ನು ಒತ್ತಿ ಹೇಳಿದರು.
ಇದನ್ನೂ ಓದಿ : ಚಾಟ್ ಜಿಪಿಟಿ ಆದಾಯ ಕುಸಿತ; ಷೇರು ಮಾರಿ ಬಂಡವಾಳ ಸಂಗ್ರಹಕ್ಕೆ ಮುಂದಾದ ಓಪನ್ ಎಐ