ಬೆಂಗಳೂರು: ಆಹಾರ ನಾಗರಿಕ ಸರಬರಾಜು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಸರ್ವರ್‌ಗಳ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತದ ಅಧಿಕಾರಿಗಳೊಂದಿಗೆ ಅವರು ಚರ್ಚೆ ನಡೆಸಿದರು.
ನಂತರ ಮಾತನಾಡಿದ ಸಚಿವರು, ಸರ್ವರ್‌ಗಳ ಸಮಸ್ಯೆಗಳನ್ನು ಈ ಕೂಡಲೇ ಬಗೆಹರಿಸಬೇಕು. ಡಿಬಿಟಿ ಮೂಲಕ ನೇರ ಹಣ ವರ್ಗಾವಣೆ ಹಣ ಎಲ್ಲಾ ಫಲಾನುಭವಿಗಳಿಗೆ ತಲುಪಲು ಕ್ರಮ ವಹಿಸಬೇಕು. ಸಮರ್ಪಕವಾಗಿ ಅನ್ನಭಾಗ್ಯದ ಎಲ್ಲಾ ಸಾಮಗ್ರಿಗಳನ್ನು ಪಡಿತರದಾರರಿಗೆ ಸರಿಯಾದ ಸಮಯಕ್ಕೆ ತಲುಪಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಜಿ.ಸಿ.ಪ್ರಕಾಶ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಆಯುಕ್ತ ಕನಗವಲ್ಲಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿಯಂತ್ರಕರಾದ ಅನಿತಾ ಲಕ್ಷ್ಮಿ, ಆಹಾರ ಸರಬರಾಜು ನಿಗಮದ ನಿರ್ದೇಶಕ ಶ್ರೀನಿವಾಸಲು, ವ್ಯವಸ್ಥಾಪಕ ಪ್ರಸನ್ನಕುಮಾರ್, ಆಹಾರ ಆಯೋಗದ ಕಾರ್ಯದರ್ಶಿ ಸುಜಾತ ಹೊಸಮನಿ ಉಪಸ್ಥಿತರಿದ್ದರು.
ಅಕ್ಟೋಬರ್ನಿಂದ ಹಣದ ಬದಲು 10 ಕೆ.ಜಿ ಅಕ್ಕಿ ನೀಡಲು ಕ್ರಮ: ಅಕ್ಟೋಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಡಿ ಹಣದ ಬದಲು 10 ಕೆ.ಜಿ ಅಕ್ಕಿ ನೀಡಲಾಗುವುದು. ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾತುಕತೆ ಅಂತಿಮ ಹಂತದಲ್ಲಿದೆ. ಶೀಘ್ರವೇ ಫಲಾನುಭವಿಗಳಿಗೆ 10 ಅಕ್ಕಿ ಪೂರೈಕೆ ಮಾಡಲಾಗುವುದು ಎಂದು ಕೆ.ಎಚ್.ಮುನಿಯಪ್ಪ (ಸೆಪ್ಟೆಂಬರ್ 30-2023) ತಿಳಿಸಿದ್ದರು.
ಇದನ್ನೂ ಓದಿ: ಅಕ್ಟೋಬರ್ನಿಂದ ಹಣದ ಬದಲು 10 ಕೆಜಿ ಅಕ್ಕಿ ನೀಡಲು ಕ್ರಮ: ಸಚಿವ ಕೆ ಎಚ್ ಮುನಿಯಪ್ಪ