ಬೆಂಗಳೂರು: ಪ್ರೊಬೆಷನರಿಯಲ್ಲಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ದುರ್ನಡತೆ ಆರೋಪ ಬಂದರೆ ಅವರ ವಿರುದ್ಧ ತನಿಖೆ ನಡೆಸದೆ ಏಕಾಏಕಿ ವಜಾ ಮಾಡುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.
ಸೇವೆಯಿಂದ ವಜಾಗೊಂಡಿರುವ ಪೊಲೀಸ್ ಪೇದೆ ರಮೇಶ್ ಮಲ್ಲಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಜಿ ಪಂಡಿತ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ಆದೇಶದಲ್ಲಿ, ನಿಯಮದ ಪ್ರಕಾರ ಪ್ರೊಬೆಷನರಿ ಸಮಯದಲ್ಲಿ ಅರ್ಜಿದಾರರನ್ನು ವಜಾಗೊಳಿಸುವ ಅಧಿಕಾರ ಇಲಾಖೆಗೆ ಇದೆ. ಆದರೆ, ಅಂತಹ ಸಿಬ್ಬಂದಿ ವಿರುದ್ಧ ದುರಾಚಾರ ಅಥವಾ ತಪ್ಪು ನಡವಳಿಕೆಯ ದೂರುಗಳು ಬಂದಾಗ ಕರ್ನಾಟಕ ಸಿವಿಲ್ ಸರ್ವಿಸ್ (ಪ್ರೊಬೆಷನ್) ನಿಯಮ 1977 ಅಧಿನಿಯಮ 5ರ ಪ್ರಕಾರ ತನಿಖೆ ಅತ್ಯಗತ್ಯ. ತನಿಖೆ ನಡೆಸದೇ ಏಕಾಏಕಿ ಸೇವೆಯಿಂದ ವಜಾ ಮಾಡಬಾರದು ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: 2017 ರಲ್ಲಿ ರಮೇಶ್ ಮಲ್ಲಿ ಪೊಲೀಸ್ ಕಾನ್ಸ್ಟೇಬಲ್ (ವೈರ್ ಲೆಸ್ ವಿಭಾಗ) ಆಗಿ ನೇಮಕಗೊಂಡಿದ್ದರು. ಅವರು ಪ್ರೊಬೆಷನರಿ ಆಗಿದ್ದಾಗಲೇ 2018 ರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಕೆಲವು ವ್ಯಕ್ತಿಗಳು ಸಂಚು ರೂಪಿಸಿದ್ದರು ಎಂಬ ಮಾಹಿತಿ ಸಿಸಿಬಿಗೆ ದೊರಕಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅರ್ಜಿದಾರ ರಮೇಶ್ ಮಲ್ಲಿ ಸೇರಿದಂತೆ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.
ಇದನ್ನೂ ಓದಿ:ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಪ್ರಾರಂಭ
ಬಳಿಕ ಅರ್ಜಿದಾರರು ಜಾಮೀನು ಪಡೆದು ಹೊರ ಬಂದಿದ್ದರು. ಅಷ್ಟರಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ವಜಾ ಮಾಡಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೆಎಟಿ ವಜಾಗೊಳಿಸಿತ್ತು. ಹೀಗಾಗಿ, ರಮೇಶ್ ಹೈಕೋರ್ಟ್ ಮೊರೆ ಹೋಗಿದ್ದರು.
ರಮೇಶ್ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ವಜಾ ಆದೇಶ ಎತ್ತಿ ಹಿಡಿದಿದ್ದ ಬೆಳಗಾವಿಯ ಕರ್ನಾಟಕ ಆಡಳಿತ ಮಂಡಳಿ ಆದೇಶವನ್ನು ರದ್ದುಗೊಳಿಸಿದೆ. ನಿಯಮದ ಪ್ರಕಾರ ಪ್ರೊಬೆಷನರಿ ಸಮಯದಲ್ಲಿ ಅರ್ಜಿದಾರರನ್ನು ವಜಾಗೊಳಿಸುವ ಅಧಿಕಾರ ಇದೆ. ಆದರೆ ಅಂತಹ ಸಿಬ್ಬಂದಿ ವಿರುದ್ಧ ದುರಾಚಾರ ಅಥವಾ ತಪ್ಪು ನಡವಳಿಕೆಯ ದೂರುಗಳು ಬಂದಾಗ ಕರ್ನಾಟಕ ಸಿವಿಲ್ ಸರ್ವಿಸ್ (ಪ್ರೊಬೆಷನ್) ನಿಯಮ 1977 ಅಧಿನಿಯಮ 5ರ ಪ್ರಕಾರ ತನಿಖೆ ಅತ್ಯಗತ್ಯ. ತನಿಖೆ ನಡೆಸದಂತೆ ಏಕಾಏಕಿ ಸೇವೆಯಿಂದ ವಜಾ ಮಾಡಬಾರದು ಎಂದು ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲರು, ‘ಅರ್ಜಿದಾರರ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಸದೆ ಏಕಾಏಕಿ ವಜಾಗೊಳಿಸಲಾಗಿದೆ, ಅವರ ಅಹವಾಲು ಆಲಿಸಿಲ್ಲ’ ಎಂದು ವಾದ ಮಂಡಿಸಿದ್ದರು. ಸರ್ಕಾರಿ ವಕೀಲರು, ‘ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಗಂಭೀರ ಆರೋಪ ಅರ್ಜಿದಾರನ ಮೇಲಿತ್ತು. ಅದನ್ನು ಆಧರಿಸಿಯೇ ವರದಿ ತರಿಸಿಕೊಂಡು ನಿಯಮದಂತೆಯೇ ವಜಾಗೊಳಿಸಲಾಗಿದೆ’ ಎಂದು ವಾದಿಸಿದ್ದರು.