ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಆರಂಭಿಸಿರುವುದೇ ಬಿಜೆಪಿಯವರು. ನಾವು ಚುನಾವಣೆಗೆ 6-8 ತಿಂಗಳು ಇರುವಾಗ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದ್ದೇವೆ. ಆ ರೀತಿ ಆಗುವುದಿದ್ದರೆ ಆ.15ರ ಒಳಗೆ ಆಗಲಿದೆ ಎಂದು ಬಿಜೆಪಿಯ ಸುರೇಶ್ ಗೌಡರು ಸ್ಪಷ್ಟವಾಗಿ ತಿಳಿಸಿದ್ದಾರೆಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಯತ್ನಾಳ್ ಅವರು 2,500 ಕೋಟಿ ಕೊಟ್ಟರೆ ಸಿಎಂ ಆಗಬಹುದು ಎಂದು ಹೇಳಿದ್ದಾರೆ. ಇಲ್ಲಿ ಅಸಮಾಧಾನದ ಹೊಗೆ ಇರುವುದು ಬಿಜೆಪಿ ಕಾರ್ಯಕರ್ತರಲ್ಲಿ. ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂಬ ಕೂಗು ಬಿಜೆಪಿಯಲ್ಲಿ ಎದ್ದಿದೆಯೇ ಹೊರತು ಕಾಂಗ್ರೆಸ್ ಕಾರ್ಯಕರ್ತರಿಂದ ಅಲ್ಲ. ಬಿಜೆಪಿಯವರು ಕಾಂಗ್ರೆಸ್ನವರಿಗೆ ಬುದ್ಧಿ ಹೇಳುವ ಬದಲು ತಮ್ಮ ಪಕ್ಷದವರಿಗೆ ಹೇಳಿದರೆ ಉತ್ತಮ. ಪದೇ ಪದೆ ಸಿಎಂ ಬದಲಾವಣೆ ಕೂಗು ಕೇಳಿಬರುತ್ತಿದೆ. ಮುಖ್ಯಮಂತ್ರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಮಾತನಾಡಿ, ಬಿಹಾರದಿಂದ ದೇಶದಲ್ಲಿ ರಾಜಕೀಯ ಬದಲಾವಣೆ ಆಗುತ್ತಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಕಾಲಚಕ್ರ ತಿರುಗುತ್ತಿರುತ್ತದೆ. ಇದರಲ್ಲಿ ಕಾಂಗ್ರೆಸ್ ಹೆಚ್ಚು ಕಾಲ ಅಧಿಕಾರದಲ್ಲಿತ್ತು. ಈಗ ಕಳೆದ ಎಂಟು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಜತೆಗಿದ್ದ ಶಿವಸೇನೆ, ಪಂಜಾಬ್ ಸೇರಿದಂತೆ ಇತರೆ ರಾಜ್ಯಗಳಲ್ಲಿನ ಸ್ಥಳೀಯ ಪಕ್ಷಗಳು ಒಡೆದಿವೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿ ಜತೆ ಕೆಲಸ ಮಾಡಿದ್ದರು. ಆದರೆ ಬಿಜೆಪಿಯವರು ಅವರ ಪಕ್ಷದ ನಾಯಕರನ್ನು ಸೇರಿಸಿಕೊಂಡು ಅವರ ಪಕ್ಷ ದುರ್ಬಲ ಮಾಡುವ ಪ್ರಯತ್ನ ಮಾಡಿದ್ದಕ್ಕೆ ಮೈತ್ರಿಯಿಂದ ಹೊರಬಂದಿದ್ದಾರೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ನಾನು ಸಿಎಂ ರೇಸ್ನಲ್ಲಿಲ್ಲ: ಸಚಿವ ಎಸ್ ಟಿ ಸೋಮಶೇಖರ್