ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಸ್ಡಿಎ ಮತ್ತು ಎಫ್ಡಿಎ ನೇಮಕಾತಿ ಪರೀಕ್ಷೆಯ ಅಕ್ರಮದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಾವು ಸಚಿವರಾಗಿದ್ದ ಅವಧಿಯಲ್ಲಿ ಪಿಎಸ್ಐ ನೇಮಕಾತಿ ಹಗರಣ ಬೆಳಕಿಗೆ ಬಂದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪ್ರಿಯಾಂಕ ಖರ್ಗೆ ಆಗ್ರಹಿಸಿದ್ದರು. ಈಗ ಅವರು ಏನು ಹೇಳುತ್ತಾರೆ. ನೈತಿಕತೆ ಇದ್ದರೆ ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ನ್ಯಾಯಾಲಯದಲ್ಲಿ ಆರ್ ಡಿ ಪಾಟೀಲ್ ಜಾಮೀನು ತಿರಸ್ಕೃತವಾಗುವವರೆಗೂ ಎಲ್ಲಿದ್ದ ಎಂಬುದರ ಮಾಹಿತಿ ಇರಲಿಲ್ಲವೇ? ಆರ್.ಡಿ. ಪಾಟೀಲ್ ಅವರನ್ನು ಏಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದರು. ಪಿಎಸ್ಐ ಹಗರಣ ಪ್ರಸ್ತಾಪವಾದಾಗ ವಿಧಾನಸಭೆಯಲ್ಲಿ ಕಾಂಗ್ರೆಸ್ಗೂ ಹಾಗೂ ಆ ವ್ಯಕ್ತಿಗೂ ಸಂಬಂಧ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಈಗ ಅವರೇ ರಕ್ಷಣೆ ಕೊಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಈಗ ಏನು ಮಾಡ್ತಾರೆ ಎನ್ನುವುದನ್ನು ಹೇಳಬೇಕು. ಯಾಕೆಂದರೆ ಪ್ರಿಯಾಂಕ್ ಖರ್ಗೆ ಅವರ ಮನೆಯಲ್ಲೇ ಆರೋಪಿ ಇರುತ್ತಿದ್ದರು. ಅವರ ಆಪ್ತ ಸಖ ಎಂದು ಗಂಭೀರ ಆರೋಪ ಮಾಡಿದರು.
ಆರ್ ಡಿ ಪಾಟೀಲ್ ನಂತಹ ಹಗರಣದ ಕಿಂಗ್ಪಿನ್ ಅನ್ನು ಸ್ವತಃ ಪ್ರಿಯಾಂಕ್ ಖರ್ಗೆ ರಕ್ಷಣೆ ಮಾಡುತ್ತಿರುವುದು ಏಕೆ? ಈಗಲೂ ಯಾಕೆ ಬಂಧಿಸಲು ತಡವಾಗುತ್ತಿದೆ. ನಿನ್ನೆ ಆರೋಪಿಯನ್ನು ಎರಡು ದಿನಗಳಲ್ಲಿ ಬಂಧಿಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಆರೋಪಿಯನ್ನು ಬಗಲಲ್ಲಿ ಇಟ್ಟುಕೊಂಡು ಇವರು ರಾಜಕೀಯ ಮಾಡುತ್ತಿದ್ದಾರೆ. ಕಲಬುರಗಿಯಲ್ಲೇ ಏಕೆ ಅಕ್ರಮ ನಡೆಯುತ್ತಿದೆ. ಪೊಲೀಸರ ಕೈವಾಡವಿಲ್ಲದೆ ಆರೋಪಿ ತಪ್ಪಿಸಿಕೊಂಡು ಹೋಗಿಲ್ಲ ಎಂದು ಟೀಕಿಸಿದರು.
ನಮ್ಮ ಉದ್ದೇಶ ಪ್ರತಿಭಾವಂತರು ಪರೀಕ್ಷೆಯಲ್ಲಿ ಪಾಸಾಗಬೇಕು. ಈ ರೀತಿಯ ಹಗರಣದಿಂದ ಹಣ ಇದ್ದವರು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ ಎಂದರೆ ಅದರಿಂದ ಸಮಾಜಕ್ಕೆ ಕೆಟ್ಟ ಹೆಸರು. ನಮ್ಮ ಸರ್ಕಾರ ಇದ್ದಾಗ ಪಿಎಸ್ಐ ಹಗರಣದಲ್ಲಿ ಈ ಆರೋಪಿಯನ್ನು ಬಂಧಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಹೊರಬಂದು, ಅದೇ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ಆದರೆ ಈ ಆರೋಪಿಯನ್ನು ಬಂಧಿಸಲಿರಲಿಲ್ಲ. ಪಿಎಸ್ಐ ಹಗರಣದಲ್ಲಿ ಭಾಗಿಯಾಗಿರುವ ಯಾರನ್ನೂ ನಾವು ಬಿಟ್ಟಿಲ್ಲ. ಐಪಿಎಸ್ ಅಧಿಕಾರಿಯನ್ನೇ ಬಂಧಿಸಲಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ : ಕಿಯೋನಿಕ್ಸ್ನಲ್ಲಿ 500 ಕೋಟಿ ರೂ ಅವ್ಯವಹಾರ : ಜಸ್ಟೀಸ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖೆ - ಸಚಿವ ಪ್ರಿಯಾಂಕ್ ಖರ್ಗೆ