ಬೆಂಗಳೂರು:ಸರ್ಕಾರದ ಖಜಾನೆ ಖಾಲಿಯಾಗಿದೆಯಾ? ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಟ್ವಿಟರ್ನಲ್ಲಿ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಟ್ವೀಟ್ ಮಾಡಿರುವ ಅವರು, ಯಾವುದೇ ಯೋಜನೆಗಳಿಗೂ ಹಣ ಇಲ್ವೇ? ನೀರಾವರಿ ನಿಗಮಗಳ ಅನುದಾನವೂ ಪೆಂಡಿಂಗ್ ಉಳಿದಿವೆ. ಇದೀಗ ಸಮಾಜಕಲ್ಯಾಣ ಇಲಾಖೆಯ ಅನುದಾನವೂ ಇಲ್ಲ. ಎಂಟು ನಿಗಮಗಳ ಅನುದಾನ ರಿಲೀಸ್ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವರ್ಷ ಅನುದಾನವನ್ನೇ ಕೊಟ್ಟಿಲ್ಲ. ಸಮಾಜಕಲ್ಯಾಣ ಇಲಾಖೆ ನಿಗಮಗಳಿಗೆ ಕೊಟ್ಟಿಲ್ಲ. ಕಳೆದ ವರ್ಷದ ಅನುದಾನವೂ ಕಟ್ ಆಗಿದೆ. ಬಿಜೆಪಿ ಸರ್ಕಾರ ಶೇ.50 ಕಡಿತಗೊಳಿಸಿದೆ. ಸೌಲಭ್ಯ ಪಡೆಯುವವರ ಅರ್ಜಿಗಳು ಹೆಚ್ಚಾಗಿವೆ. ಮೂರು ಪಟ್ಟು ಅರ್ಜಿಗಳು ನಿಗಮಗಳಿಗೆ ಬಂದಿವೆ. ಇದಕ್ಕೆ ಸಚಿವ ಕೋಟಾ ಅವ್ರೇ ಏನು ಉತ್ತರ ಕೊಡ್ತೀರಾ ಎಂದು ಪ್ರಶ್ನಿಸಿದ್ದಾರೆ.
ನೈತಿಕ ಪೊಲೀಸ್ ಗಿರಿ ಸರಿಯಲ್ಲ:
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ ಮಾಡಿದ್ದು, ವಿ.ಎಚ್.ಪಿ. ನಾಯಕರು ಗೋಹತ್ಯೆ, ಲವ್ ಜಿಹಾದ್ ವಿರುದ್ಧ ತಾವು ಕತ್ತಿ ಹಿಡಿದರೆ ಶವ ಹೂಳಲೂ ಜಾಗ ಸಿಗದು ಎನ್ನುವ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯ ಬಿಜೆಪಿ ಪಕ್ಷದವರು ನೈತಿಕ ಪೊಲೀಸ್ ಗಿರಿಗೆ ಬೆಂಬಲ ಕೊಡುತ್ತಿದ್ದಾರೆ. ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಬಸವರಾಜ್ ಬೊಮ್ಮಾಯಿ ಸರ್ಕಾರ ಏಕೆ ಕೈಕಟ್ಟಿ ಕುಳಿತಿದೆ.
ಏಕೆ ಇಂತಹ ಸಂಘಟನೆ ನಿಷೇಧಿಸುವುದಿಲ್ಲ? ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಭಯದಿಂದ ಬದುಕುವ ಸ್ಥಿತಿ ಬಂದಿದೆ. ಇದು ಸರ್ಕಾರ ನಡೆಸುವ ರೀತಿಯೇ? ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.