ಬೆಂಗಳೂರು/ತುಮಕೂರು/ವಿಜಯಪುರ: ಕೋವಿಡ್ ಅಟ್ಟಹಾಸಕ್ಕೆ ರಾಜ್ಯ ತತ್ತರಗೊಂಡಿದೆ. ಸೋಂಕಿತರಿಗೆ ಪೂರಕ ಚಿಕಿತ್ಸೆ ಒದಗಿಸುವಲ್ಲಿ ಸರ್ಕಾರಿ ಆಸ್ಪತ್ರೆಗಳು ಏನೇ ಪ್ರಯತ್ನ ನಡೆಸಿದರೂ ಕೂಡ ಅದು ಸಾಲುತ್ತಿಲ್ಲ ಎನ್ನುವ ಪರಿಸ್ಥಿತಿ. ಹಾಗಾಗಿ ಖಾಸಗಿ ಆಸ್ಪತ್ರೆಗಳು ಕೂಡ ನಿಗದಿತ ದರದಲ್ಲೇ ಸೇವೆ ಒದಗಿಸಬೇಕೆಂದು ಸರ್ಕಾರ ಘೋಷಿಸಿದೆ. ಆದ್ರೆ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ಸುಲಿಗೆ ಮಾಡ್ತಿದೆ ಅನ್ನೋ ಆರೋಪಗಳು ಕೇಳಿಬಂದಿದ್ದು, ಇದರ ನಿಯಂತ್ರಣಕ್ಕೆ ಜಿಲ್ಲಾಡಳಿತಗಳು ಮುಂದಾಗಿವೆ.
ರಾಜ್ಯ ರಾಜಧಾನಿಯಲ್ಲಿ ಆರೋಗ್ಯ ಇಲಾಖೆ ತೆಗೆದುಕೊಂಡಿರೋ ಕ್ರಮಗಳಿಂದ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ದುಬಾರಿ ಶುಲ್ಕ ವಿಧಿಸುತ್ತಿಲ್ಲ. ಸ್ವಾಬ್ ಟೆಸ್ಟ್ ರಿಪೋರ್ಟ್ ಅಪ್ಲೋಡ್ ಮಾಡದ ಲ್ಯಾಬ್ಗಳಿಗೆ ಬೀಗ ಮುದ್ರೆ, ಮೋಸ ಮಾಡಲೆತ್ನಿಸಿದವರ ಅಮಾನತು, ಕೋವಿಡ್ ಬೆಡ್ ನೀಡದ ಆಸ್ಪತ್ರೆಗಳಿಗೆ ನೋಟಿಸ್...ಹೀಗೆ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಬಿಸಿ ಮುಟ್ಟಿಸಿದ ಕಾರಣ ಖಾಸಗಿ ಆಸ್ಪತ್ರೆಗಳೀಗ ನಿಗದಿತ ದರದಲ್ಲೆ ಸೋಂಕಿತರಿಗೆ ಸೇವೆ ಒದಗಿಸುತ್ತಿವೆ.
ತುಮಕೂರಿನಲ್ಲೂ ರೋಗಿಗಳಿಂದ ಹೆಚ್ಚಿನ ಹಣ ಪಡೆಯುತ್ತಾರೆ. ಲಸಿಕೆ ಅಭಾವ ಸೃಷ್ಟಿಸಿ ಬಳಿಕ ಹೆಚ್ಚಿನ ಹಣಕ್ಕೆ ಮಾರುತ್ತಾರೆನ್ನುವ ಆರೋಪಗಳು ಖಾಸಗಿ ಆಸ್ಪತ್ರಗಳ ವಿರುದ್ಧ ಕೇಳಿ ಬಂದಿವೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರೋ ಜಿಲ್ಲಾಡಳಿತ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಹಾಗೂ ಪೂರಕ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.
ವಿಜಯಪುರ ಕಥೆಯೂ ಇದ್ರಿಂದ ಹೊರತಲ್ಲ. ಆದ್ರೆ ಜಿಲ್ಲಾಡಳಿತ ಕೈಕಟ್ಟಿ ಕುಳಿತಿಲ್ಲ. ಚಿಕಿತ್ಸೆ ನೆಪದಲ್ಲಿ ರೋಗಿಗಳಿಂದ ಹಣ ಸುಲಿಗೆಯಾಗದಂತೆ ಸಮಿತಿ ರಚನೆ ಮಾಡಲಾಗಿದೆ. ರೋಗಿಗಳ ಸಂಬಂಧಿಕರಿಂದ ದೂರುಗಳು ಬಂದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗ್ತಿದೆ. ವ್ಯಾಕ್ಸಿನ್ ನೀಡುವಲ್ಲಿಯೂ ಮೋಸ ಆಗದಂತೆ ನೋಡಿಕೊಳ್ಳಲಾಗ್ತಿದೆ.
ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ, ವ್ಯಾಕ್ಸಿನ್, ಪರೀಕ್ಷೆ ಹೆಸರಿನಲ್ಲಿ ರೋಗಿಗಳಿಂದ ಹಣ ವಸೂಲಿ ಮಾಡ್ತವೆ ಅನ್ನೋ ಆರೋಪಕ್ಕೆ, ಜಿಲ್ಲಾಡಳಿತಗಳು ಸೂಕ್ತ ಕ್ರಮ ಕೈಗೊಂಡಿವೆ ಎಂದ್ರೆ ತಪ್ಪಾಗಲಾರದು. ಕೋವಿಡ್ ಎರಡನೇ ಅಲೆಯಲ್ಲಿ ಸೋಂಕು ವೇಗವಾಗಿ ಹರಡುವುದರಿಂದ ಪೂರಕ ಚಿಕಿತ್ಸೆ ಒದಗಿಸೋದು ಆಸ್ಪತ್ರೆಗಳಿಗೆ ಸವಾಲಾಗಿದೆ. ಹಾಗಾಗಿ ಜನರು ನಿಯಮ ಪಾಲಿಸಿ ಸೋಂಕು ನಿಯಂತ್ರಿಸಬೇಕಿದೆ.