ಬೆಂಗಳೂರು: ಜಯನಗರದಲ್ಲಿರುವ ಕೆಎಸ್‌ಆರ್‌ಟಿಸಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡುವ ನಿರ್ಧಾರಕ್ಕೆ ಸಂಸದ ತೇಜಸ್ವಿ ಸೂರ್ಯ ಬಂದಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಆರೋಪಿಸಿದ್ದಾರೆ. ಅಲ್ಲದೆ, ಆಸ್ಪತ್ರೆಯ ಖಾಸಗೀಕರಣವನ್ನು ಅವರು ವಿರೋಧಿಸಿದ್ದಾರೆ.
ಹಲವು ವರ್ಷಗಳಿಂದ ಕೆಎಸ್‌ಆರ್‌ಟಿಸಿ ಆಸ್ಪತ್ರೆಯಲ್ಲಿ ನೌಕರರು ಅಗತ್ಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಸಾರಿಗೆ ನೌಕರರಿಗೆ ಇರುವ ಏಕೈಕ ಆಸ್ಪತ್ರೆ ಇದಾಗಿದ್ದು, ಇನ್ನೂ ಒಂದು ಆಸ್ಪತ್ರೆ ತೆರೆದು ಹೆಚ್ಚಿನ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರ ಯೋಚಿಸಬೇಕು. ಆದರೆ ಸಂಸದ ತೇಜಸ್ವಿ ಸೂರ್ಯ ಈಗಿರುವ ಆಸ್ಪತ್ರೆಯನ್ನೇ ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡಲು ಹೊರಟಿರುವುದು ಖಂಡನೀಯ ಎಂದು ಹೇಳಿದರು.
ಕಮಿಷನ್ ಆಸೆಗಾಗಿ ತೇಜಸ್ವಿ ಸೂರ್ಯ ಈ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಲು ಮುಂದಾಗಿದ್ದಾರೆ. ಇದರಿಂದಾಗಿ ಅಲ್ಲಿರುವ ನೌಕರರು ಕೆಲಸ ಕಳೆದುಕೊಳ್ಳುವ ಅಪಾಯವಿದೆ. ಸಾರಿಗೆ ನೌಕರರು ಸಣ್ಣಪುಟ್ಟ ಚಿಕಿತ್ಸೆಗೂ ದುಬಾರಿ ಬೆಲೆ ತೆರಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಸರ್ಕಾರವು ಹಲವು ವರ್ಷಗಳಿಂದ ಕಾಪಾಡಿಕೊಂಡ ಸಂಸ್ಥೆಗಳನ್ನು ಭ್ರಷ್ಟ ಬಿಜೆಪಿಯು ಒಂದೊಂದಾಗಿಯೇ ಮಾರಾಟ ಮಾಡುತ್ತಿದೆ ಎಂದು ಮೋಹನ್ ದಾಸರಿ ದೂರಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ ಜನತೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಹೆಚ್ಡಿಕೆ ಬೆಂಬಲ
ವಿಮಾ ಸೌಲಭ್ಯ ಇಲ್ಲದೇ ನೌಕರರ ಸಂಕಷ್ಟ: ಕೆಎಸ್‌ಆರ್‌ಟಿಸಿ ನೌಕರರು ಏಳನೇ ವೇತನ ಶ್ರೇಣಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಸರಿಯಾದ ಪಿಂಚಣಿ, ವಿಮಾ ಸೌಲಭ್ಯ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ತುಟಿ ಬಿಚ್ಚದ ಸಂಸದ ತೇಜಸ್ವಿ ಸೂರ್ಯ ಕೆಎಸ್‌ಆರ್‌ಟಿಸಿ ಆಸ್ಪತ್ರೆಯನ್ನು ಮಾರಾಟ ಮಾಡಲು ನಿರ್ಧರಿಸಿರುವುದು ನಾಚಿಕೆಗೇಡಿನ ಸಂಗತಿ. ಅವರು ಈ ನಿರ್ಧಾರದಿಂದ ಶೀಘ್ರವೇ ಹಿಂದೆ ಸರಿಯಬೇಕು ಎಂದು ಮೋಹನ್ ದಾಸರಿ ಒತ್ತಾಯಿಸಿದರು.