ಬೆಂಗಳೂರು: ಬಿಬಿಎಂಪಿ ವತಿಯಿಂದ ಸರ್ಕಾರಿ ಕೋಟಾದಡಿ, ಖಾಸಗಿ ಆಸ್ಪತ್ರೆಗೆ ದಾಖಲಾದ ಕೋವಿಡ್ ಸೋಂಕಿತರಿಂದಲೂ ಸಾವಿರಾರು ರೂಪಾಯಿ ಸುಲಿಗೆ ಮಾಡಲು ಖಾಸಗಿ ಆಸ್ಪತ್ರೆಗಳು ಮುಂದಾಗಿದೆ.
ಪ್ಲಾಸ್ಮಾ ಥೆರಪಿ, ರೆಮ್ಡಿಸಿವಿರ್ ಇಂಜಕ್ಷನ್ ಹೆಸರಲ್ಲಿ ಬಿಲ್ ಮಾಡಿ, ಹಣ ಪಾವತಿಸದೆ ಡಿಸ್ಚಾರ್ಜ್ ಮಾಡುವುದಿಲ್ಲವೆಂದು ಅಮಾನವೀಯವಾಗಿ ಕೆಲ ಖಾಸಗಿ ಆಸ್ಪತ್ರೆಗಳು ನಡೆದುಕೊಳ್ಳುತ್ತಿವೆ. ಆದರೆ ಮೊದಲನೇ ಕೋವಿಡ್ ಅಲೆಯಲ್ಲಿ ಈ ರೀತಿ ಘಟನೆಗಳು ನಡೆಯುತ್ತಿರಲಿಲ್ಲ. ಈ ಬಾರಿ ರೆಮ್ ಡಿಸಿವಿರ್ ಇಂಜಕ್ಷನ್ಗೆ ಕೊರತೆ ಉಂಟಾಗಿರುವ ಹಿನ್ನೆಲೆ, ಆಸ್ಪತ್ರೆಗಳು ರೋಗಿಗಳ ಕುಟುಂಬಗಳಿಗೆ ಇಂಜಕ್ಷನ್ ತಂದುಕೊಡುವಂತೆ ಒತ್ತಡ ಹೇರುತ್ತಿವೆ. ಆದರೆ ಈ ಇಂಜಕ್ಷನ್ ಎಲ್ಲಿ, ಹೇಗೆ ಸಿಗುತ್ತವೆ ಎಂಬ ಮಾಹಿತಿಯೇ ಇಲ್ಲದೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.
ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೋವಿಡ್ ಸೋಂಕಿತರಾಗಿದ್ದ ಶ್ರೀಧರ್ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಕೋವಿಡ್ನಿಂದ ಕ್ರಿಟಿಕಲ್ ಸ್ಟೇಜ್ ತಲುಪಿ ಮಂಪರಾಗಿತ್ತು. ತೀರಾ ಆಕ್ಸಿಜನ್ ಲೆವೆಲ್ ಕಡಿಮೆ ಆದಾಗ ಬಿಬಿಎಂಪಿ ಮೂಲಕ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳಬೇಕಾಯಿತು. ಆದರೆ ಬಿಜಿಎಸ್ ಆಸ್ಪತ್ರೆ ಬಳಿ ಹೋದಾಗ ಐಸಿಯು ಬೆಡ್ ಇಲ್ಲ ಎಂದರು. ಮತ್ತೆ ಬೇರೆ ಆಸ್ಪತ್ರೆ ಬಳಿ ಹೋದಾಗ ಆಂಬುಲೆನ್ಸ್ ನಲ್ಲಿಯೂ ಆಕ್ಸಿಜನ್ ಖಾಲಿ ಆಯ್ತು. ಆರ್ ಆರ್‌ನಗರದಿಂದ ಬನ್ನೇರುಘಟ್ಟದ ಅಪೊಲೋ ಆಸ್ಪತ್ರೆವರೆಗೆ ಉಸಿರಾಡಲೂ ಕಷ್ಟದ ಪರಿಸ್ಥಿತಿಯಲ್ಲಿ ಹೋಗಬೇಕಾಯ್ತು. ಅಲ್ಲಿ ಐಸಿಯುಗೆ ದಾಖಲಾದೆ. ಆದರೆ ನನ್ನ ಬಳಿ ಹಣವೂ ಇರಲಿಲ್ಲ. ಡಿಸ್ಚಾರ್ಜ್ ಸಮಯದಲ್ಲಿ ರೆಮ್ ಡಿಸಿವಿರ್ ಇಂಜಕ್ಷನ್, ಪ್ಲಾಸ್ಮಾ ಥೆರಪಿಯ ಪ್ರಕ್ರಿಯೆಗೆ 24,800 ವೆಚ್ಚವಾಗಿದೆ ಕಟ್ಟಬೇಕೆಂದು ತಿಳಿಸಿದರು. ಆದ್ರೆ ಪಾಲಿಕೆಯಿಂದ ಆಸ್ಪತ್ರೆಗೆ ದಾಖಲಾದ್ರೆ ಉಚಿತ ಚಿಕಿತ್ಸೆ ಎಂದು ಸರ್ಕಾರವೂ ಹೇಳಿದ್ದು, ಇದೆಲ್ಲ ಸುಳ್ಳು ಎಂಬುದು ನಂತರ ಗೊತ್ತಾಯ್ತು. ಹೀಗಾಗಿ ಎಚ್ಚರದಲ್ಲಿರಿ, ಗುಂಪಲ್ಲಿ ಓಡಾಡದಿರಿ ಎಂದು ಮನವಿ ಮಾಡಿದ್ದಾರೆ.
ರೆಮ್ಡಿಸಿವಿರ್ ಪಾಲಿಕೆಯಿಂದಲೇ ಪೂರೈಕೆ!
ಸರ್ಕಾರಿ ಕೋಟಾದಡಿ ದಾಖಲಾದ ರೋಗಿಗಳಿಗೆ ಸರ್ಕಾರವೇ ರೆಮ್ಡಿಸಿವಿರ್ ಪೂರೈಕೆ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದರೂ, ಖಾಸಗಿ ಆಸ್ಪತ್ರೆಗಳು ಇದನ್ನು ಬಳಸಿಕೊಳ್ಳುತ್ತಿಲ್ಲ. ಪೂರೈಕೆಯೂ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ರೋಗಿಗಳ ಕುಟುಂಬ ಸಂಕಷ್ಟಕ್ಕೆ ಒಳಗಾಗಿದೆ.
ಪ್ಲಾಸ್ಮಾ ಥೆರಪಿಯನ್ನು ಮೊದಲ ಅಲೆಯ ವೇಳೆಯೇ ಪ್ರಯೋಜನಕಾರಿ ಅಲ್ಲ ಎಂದು ನಿರ್ಧರಿಸಿದ್ದರೂ, ಮತ್ತೆ ಕೆಲ ಆಸ್ಪತ್ರೆಗಳು ಪ್ಲಾಸ್ಮಾ ತಂದುಕೊಡಿ ಎಂದು ಒತ್ತಡ ಹೇರುತ್ತಿವೆ. ಆದರೆ, ನಗರದಲ್ಲಿ ಪ್ಲಾಸ್ಮಾ ದಾನ ಮಾಡಲೂ ಯಾರೂ ಸಿದ್ಧರಿಲ್ಲ.
ರಾಜ್ಯಕ್ಕೆ 23 ಸಾವಿರ ಡೋಸ್ ಲಭ್ಯ
ವಿವಿಧ ಕಂಪೆನಿಗಳು ಉತ್ಪಾದಿಸುವ ರೆಮ್ಡಿಸಿವಿರ್ ಸುಮಾರು 20 ಸಾವಿರದಿಂದ, 23 ಸಾವಿರ ಡೋಸ್ಗಳು ಪ್ರತಿದಿನ ರಾಜ್ಯಕ್ಕೆ ಲಭಿಸುತ್ತಿದ್ದು, ಅರ್ಧ ಭಾಗ ಸರ್ಕಾರಿ ಕೋಟಾದಡಿ ದಾಖಲಾದ ರೋಗಿಗಳಿಗೆ ಹಾಗೂ ಇನ್ನರ್ಧ ವಿತರಕರ ಮೂಲಕ ಖಾಸಗಿ ಆಸ್ಪತ್ರೆಗೆ ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಬಹುಪಾಲು ಖಾಸಗಿ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಕೊರತೆ ಸೃಷ್ಟಿಯಾಗಿದೆ. ಖಾಸಗಿ ಬಳಕೆಗಾಗಿ ನಿನ್ನೆಯೂ 6500 ಡೋಸ್ ಪೂರೈಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ರೋಗಿಗಳಲ್ಲಿ ಶ್ವಾಸಕೋಶದ ಉರಿಯೂತ ತಡೆ ಮತ್ತು ಕೊರೊನಾ ವೈರಸ್ ದ್ವಿಗುಣಗೊಳ್ಳುವ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಈ ಔಷಧ ಸಹಕಾರಿಯಾಗಲಿದೆ. ರೆಮ್‌ಡಿಸಿವಿರ್ ಪ್ರತಿ ಡೋಸ್ಗೆ 899 ರಿಂದ 6000 ದವರೆಗೆ ದರವಿದೆ. ಆದರೆ, ಕಾಳಸಂತೆಯಲ್ಲಿ ಹತ್ತರಿಂದ 40 ಸಾವಿರದವರೆಗೂ ಮಾರಾಟವಾಗ್ತಿದೆ.
ನಗರದ ಖಾಸಗಿ ಆಸ್ಪತ್ರೆಯ ರೋಗಿಯೊಬ್ಬರಿಗೆ ರೆಮ್ಡಿಸಿವಿರ್ ತುರ್ತಾಗಿ ಬೇಕು ಎಂದಾಗ, ಯಲಹಂಕದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೇ 899 ದರ ಇರುವ ರೆಮ್ಡಿಸಿವಿರ್ ಚುಚ್ಚುಮದ್ದನ್ನು ಹತ್ತು ಸಾವಿರ ರೂಪಾಯಿಗೆ ಅಕ್ರಮವಾಗಿ ಮಾರಾಟ ಮಾಡಿರುವ ಘಟನೆಯೂ ನಡೆದಿದೆ. ಅದೂ ಅಲ್ಲದೆ ಈ ಚುಚ್ಚುಮದ್ದಿನ ಅವಧಿ ಮುಗಿದಿರುವ ಡೋಸನ್ನೂ ಕೊಟ್ಟು ಹಣ ಪಡೆದಿದ್ದಾರೆ. ಆದರೆ ಸರ್ಕಾರವೇ ಅನುಮತಿ ಕೊಟ್ಟಿರುವ ಹಿನ್ನೆಲೆ ಮಾರಾಟ ಮಾಡಲಾಗ್ತಿದೆ. ಒಟ್ಟಿನಲ್ಲಿ ಪ್ಲಾಸ್ಮಾ, ರೆಮ್ ಡಿಸಿವರ್ ಹೆಸರಲ್ಲಿ ಕೋವಿಡ್ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ಸುಲಿಗೆಗೆ ಇಳಿದಿರೋದಂತೂ ಸತ್ಯ.
ಓದಿ: ಆ್ಯಂಬುಲೆನ್ಸ್ನಲ್ಲಿಟ್ಟುಕೊಂಡು ಶವಾಗಾರಕ್ಕೆ ಹೋಗ್ತಿದ್ದ ವೇಳೆ ಕೆಳಗೆ ಬಿದ್ದ ಮೃತದೇಹ.. ವಿಡಿಯೋ!