ಬೆಂಗಳೂರು: ಕೋವಿಡ್ನಿಂದ ಸಾವನ್ನಪ್ಪಿದವರ ಮೃತದೇಹ ನೀಡಲು ಖಾಸಗಿ ಆಸ್ಪತ್ರೆ ಗಳು ಬಿಲ್ ಪಾವತಿಸುವಂತೆ ಸಂಬಂಧಿಕರಿಗೆ ಒತ್ತಾಯ ಮಾಡುವಂತಿಲ್ಲ ಎಂದು ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಕೊರೊನಾದಿಂದ ಖಾಸಗಿ ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದರೆ, ಅಂತಹ ವ್ಯಕ್ತಿಗಳ ಶವವನ್ನು ಕುಟುಂಬಸ್ಥರಿಗೆ ನೀಡಬೇಕು. ಬಿಲ್ ಪಾವತಿ ಮಾಡದೆ ಇದ್ರೂ ಮೃತದೇಹವನ್ನು ಹಸ್ತಾಂತರ ಮಾಡಬೇಕು. KPME ಕಾಯ್ದೆ ಅಡಿ ಮೃತದೇಹ ನೀಡಲು ನಿರಾಕರಿಸುವಂತಿಲ್ಲ ಎಂದಿದೆ.
ಒಂದು ವೇಳೆ ನಿಯಮ ಗಾಳಿಗೆ ತೂರಿದ್ರೆ ಆಸ್ಪತ್ರೆ ಲೈಸೆನ್ಸ್ ರದ್ದು ಮಾಡುವುದಾಗಿ, ಆರೋಗ್ಯ ಇಲಾಖೆ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶಿಸಿದ್ದಾರೆ.
ರಾಜ್ಯದ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರು ಮೃತಪಟ್ಟಲ್ಲಿ, ಆಸ್ಪತ್ರೆಯ ಹಾಗೂ ಚಿಕಿತ್ಸೆಯ ಬಾಕಿ ವೆಚ್ಚವನ್ನು ಪಾವತಿಸಿದ ನಂತರವೇ ಶವವನ್ನ ಸಂಬಂಧಿಕರಿಗೆ ನೀಡುವಂತೆ ಷರತ್ತು ವಿಧಿಸುತ್ತಿರುವ ಪ್ರಕರಣಗಳು ವರದಿಯಾದ ಕಾರಣ, ಸರ್ಕಾರ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಈ ರೀತಿ ವರದಿಯಾದ ಪ್ರಕರಣಗಳ ಮಾಹಿತಿ ಹಾಗೂ ಕೈಗೊಂಡ ಕ್ರಮಗಳ ಕುರಿತು ವಾರಕ್ಕೆ ಒಂದು ಬಾರಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.