ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪುಸಕ್ತ ವರ್ಷದ 2ನೇ ಕಂತಿಗೆ ಇಂದು ರಾಜ್ಯದ 51.19 ಲಕ್ಷ ರೈತರಿಗೆ 1023.00 ಕೋಟಿ ರೂ.ಗಳ ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ. ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೇರವಾಗಿ ರೈತ ಕುಟುಂಬಗಳ ಖಾತೆಗಳಿಗೆ ಬಿಡುಗಡೆ ಮಾಡಲಿದ್ದಾರೆ.

ರಾಜ್ಯದಲ್ಲಿ ಭಾರತ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮಾನ್ ನಿಧಿ ಯೋಜನೆಯನ್ನು 2019, ಫೆಬ್ರವರಿ 1 ರಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತ ಕುಟುಂಬಕ್ಕೆ ಕೇಂದ್ರ ಸರ್ಕಾರ ವಾರ್ಷಿಕ 6000 ರೂ.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಈ ಅನುದಾನವನ್ನು ರೂ.2000 ರೂ.ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತಿದೆ.

ಆರ್ಥಿಕ ನೆರವು ವರ್ಗಾವಣೆಗೆ ಆದೇಶ: ಈ ಯೋಜನೆಯಡಿ ಇಲ್ಲಿಯವರೆಗೆ, 55.06 ಲಕ್ಷ ರೈತ ಕುಟುಂಬಗಳು ಕನಿಷ್ಠ ಒಂದು ಕಂತು ಪಡೆಯುವ ಮೂಲಕ ಯೋಜನೆಯ ಲಾಭವನ್ನು ಪಡೆದಿರುತ್ತಾರೆ. ಮಾರ್ಚ್ 2019 ರಿಂದ ಜುಲೈ 2021 ರವರೆಗೆ ಭಾರತ ಸರ್ಕಾರದಿಂದ ಒಟ್ಟು 6940,07 ಕೋಟಿ ರೂ. ಆರ್ಥಿಕ ಸಹಾಯಧನವನ್ನು ನೀಡಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅನುಮೋದಿಸಲ್ಪಟ್ಟ ರೈತರಿಗೆ ಎರಡು ಕಂತುಗಳಲ್ಲಿ ವರ್ಷಕ್ಕೆ ರೂ. 4000 ರೂ.ನಂತೆ ಆರ್ಥಿಕ ನೆರವು ವರ್ಗಾವಣೆಗೆ ಆದೇಶ ಹೊರಡಿಸಲಾಗಿದೆ. ಇಲ್ಲಿಯವರೆಗೆ 2849.16 ಕೋಟಿ ರೂ.ಗಳ ಆರ್ಥಿಕ ಸಹಾಯಧನವನ್ನು ನೀಡಲಾಗಿದೆ.
ರಾಜ್ಯಕ್ಕೆ ಪ್ರಶಸ್ತಿ: ಈ ಯೋಜನೆಯಡಿ ಎಲ್ಲಾ ಪಾವತಿಗಳನ್ನು ಸಾಧ್ಯವಾದಷ್ಟು, ಆಧಾರ್ ಆಧಾರಿತ ಡಿಬಿಟಿ ಮುಖಾಂತರ ಮಾಡಬೇಕೆಂದು ಕೇಂದ್ರ ಸರ್ಕಾರ ಬಯಸುತ್ತದೆ. ಎಲ್ಲಾ ರಾಜ್ಯಗಳ ಪೈಕಿ, ಕರ್ನಾಟಕ ರಾಜ್ಯವು ಅತಿ ಹೆಚ್ಚು ಶೇಕಡಾವಾರು ಆಧಾರ್ ಆಧಾರಿತ ವಹಿವಾಟುಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ 2020-21 ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ದೊರೆತಿದೆ.
ನಿರಂತರ ಮೇಲ್ವಿಚಾರಣೆಯ ಭಾಗವಾಗಿ ಯೋಜನೆಯ ಫಲಾನುಭವಿಗಳಾಗಿರುವ ರೈತ ಕುಟುಂಬಗಳ ಅರ್ಹತೆಯನ್ನು ನಿಯತಕಾಲಿಕವಾಗಿ ಪರಿಶೀಲಿಸಲಾಗುತ್ತಿದೆ. ಇದೀಗ ಬಿಡುಗಡೆಯಾಗಲಿರುವ ಜಿಲ್ಲಾವಾರು ಮಾಹಿತಿ ಈ ಕೆಳಕಂಡ ಪಟ್ಟಿಯಲ್ಲಿ ನಮೂದಿಸಲಾಗಿದೆ.
ಓದಿ: ರಾಜ್ಯದಲ್ಲಿ ಸೌರಶಕ್ತಿ ಉತ್ತೇಜಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?