ನವದೆಹಲಿ/ಬೆಂಗಳೂರು: ಜುಲೈ 28ಕ್ಕೆ ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸಲಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ ಹಿನ್ನೆಲೆ ಈ ಆಚರಣೆ ನಡೆಯಲಿದೆ. ನಾನು ಅಧಿಕಾರಕ್ಕೆ ಬಂದು ಒಂದು ವರ್ಷವಾಗಲಿದೆ. ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಸಮಾವೇಶ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೂವರು ಕೇಂದ್ರ ಸಚಿವರ ಭೇಟಿ: ಇಂದು ಕೇಂದ್ರದ ಮೂವರು ಸಚಿವರನ್ನು ಭೇಟಿಯಾಗಿದ್ದೇನೆ. ಹಡಗು ಬಂದರು ಸಚಿವ ಸರ್ಬಾನಂದ ಸೋನಾವಾಲರನ್ನು ಭೇಟಿಯಾಗಿದ್ದೇನೆ. ಸಾಗರಮಾಲದ 27 ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. 10 ಯೋಜನೆಗಳಿಗೆ ಕೇಂದ್ರದಿಂದ ಒಪ್ಪಿಗೆ ಸಿಕ್ಕಿದೆ. ಕೆಲವು ಯೋಜನೆಗಳಿಗೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದೇವೆ. ಮಜಾಳಿ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಕಾಳಿ ವಾಟರ್ ವೇ ಯೋಜನೆಗೆ ಡಿಪಿಆರ್ ಕಳುಹಿಸಬೇಕಿದೆ. ಡಿಪಿಆರ್ ಕಳುಹಿಸಿದ ಬಳಿಕ ಮಂಜೂರು ಮಾಡಲಿದ್ದಾರೆ. ಬೈಂದೂರು, ಮಲ್ಪೆ, ಮಂಗಳೂರು ಮರೀನಾ ಯೋಜನೆ ರೂಪಿಸಲಾಗಿದೆ. ಪ್ಲೋಟಿಂಗ್ ಜಟ್ಟಿಸ್ಗೂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದರು.
ಇದನ್ನೂ ಓದಿ: ಆಸ್ತಿ ನೋಂದಣಿ ಪ್ರಕ್ರಿಯೆ.. ರಾಜ್ಯದ ಜನತೆಗೆ ಮತ್ತೆ ಸಿಹಿ ಸುದ್ದಿ ನೀಡಿದ ಸರ್ಕಾರ
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಐದು ರಿಂಗ್ ರೋಡ್ಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ರೈಲ್ವೆ ಓವರ್ ಬ್ರಿಡ್ಜ್ ಗಳ ನಿರ್ಮಾಣದ ಬಗ್ಗೆ ಚರ್ಚೆ ಮಾಡಲಾಗಿದೆ. ಪಿಯೂಶ್ ಗೋಯಲ್ ಬಳಿ ವಿಜಯಪುರ ಮತ್ತು ಕಲಬುರಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.