ಬೆಂಗಳೂರು : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಬಹುನಿರೀಕ್ಷಿತ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಚುನಾವಣಾ ಪ್ರಚಾರ ಕಾರ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ಮಾರ್ಚ್ 12ರ ಭಾನುವಾರ ಬೆಳಗ್ಗೆ 8.20ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ವಾಯುಪಡೆ ವಿಶೇಷ ವಿಮಾನದಲ್ಲಿ ಹೊರಡಲಿರುವ ಪ್ರಧಾನಿ ನರೇಂದ್ರ ಮೋದಿ 11.10ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 11.15ಕ್ಕೆ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಪ್ರಯಾಣಿಸಲಿದ್ದು, 11.35ಕ್ಕೆ ಮಂಡ್ಯ ತಲುಪಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಮಂಡ್ಯದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮ ಸ್ಥಳಕ್ಕೆ ತಲುಪಲಿದ್ದಾರೆ. ಅಪರಾಹ್ನ 12 ರಿಂದ ಮಧ್ಯಾಹ್ನ 1 ಗಂಟೆವರೆಗೂ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಶಿಲಾನ್ಯಾಸ, ಉದ್ಘಾಟನಾ ಕಾರ್ಯ ನಡೆಸಲಿದ್ದಾರೆ.
ಮಧ್ಯಾಹ್ನ 1.15ಕ್ಕೆ ಮಂಡ್ಯದಿಂದ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಲಿದ್ದು, 1.40ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ವಾಯುಪಡೆ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 2.20ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಲಿರುವ ಪ್ರಧಾನಿ ಮೋದಿ, 2.45ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. 3.10ಕ್ಕೆ ಹೆಲಿಪ್ಯಾಡ್ ನಿಂದ ರಸ್ತೆ ಮೂಲಕ ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ಪಿಎಂ ತೆರಳಲಿದ್ದಾರೆ. ಮಧ್ಯಾಹ್ನ 3.15 ರಿಂದ 4.15ರವರೆಗೆ ಹುಬ್ಬಳ್ಳಿಯಲ್ಲಿ ವಿವಿಧ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಲಿದ್ದಾರೆ.
ಮಂಡ್ಯ, ಹುಬ್ಬಳ್ಳಿ ಕಾರ್ಯಕ್ರಮ ಮುಗಿಸಿದ ನಂತರ ಸಂಜೆ 4.50ಕ್ಕೆ ವಾಯುಪಡೆ ವಿಶೇಷ ವಿಮಾನ ನಿಲ್ದಾಣದ ಮೂಲಕ ನವದೆಹಲಿಗೆ ಪ್ರಯಾಣಿಸಲಿದ್ದು, ಸಂಜೆ 7.35ಕ್ಕೆ ದೆಹಲಿ ವಿಮಾನ ನಿಲ್ದಾಣ ತಲುಪಲಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಂಗಳಿಗೆ ಕನಿಷ್ಟ ಎರಡು ಬಾರಿ ರಾಜ್ಯಕ್ಕೆ ಆಗಮಿಸುತ್ತಿದ್ದು ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಬೃಹತ್ ಸಮಾವೇಶಗಳಲ್ಲಿ ಭಾಗಿಯಾಗಿ ಪಕ್ಷದ ಪರ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ನಾಲ್ಕು ದಿಕ್ಕಿನಿಂದ ನಾಲ್ಕು ರಥಯಾತ್ರೆ ಆರಂಭಗೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಥಯಾತ್ರೆಗಳಿಗೆ ಚಾಲನೆ ನೀಡಿದ್ದರು.
ಮಾರ್ಚ್ 1 ರಂದು ಮೊದಲ ರಥಯಾತ್ರೆಗೆ ಮಲೆಮಹಾದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಿದ್ದ ಜೆಪಿ ನಡ್ಡಾ ಇಂದು ಮತ್ತೆ ರಾಜ್ಯಕ್ಕೆ ಆಗಮಿಸಿ ಪಕ್ಷದ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಅದರ ಬೆನ್ನಲ್ಲೇ ಇನ್ನು ಮೂರು ದಿನದಲ್ಲೇ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಪಕ್ಷಕ್ಕೆ ಮತ್ತಷ್ಟು ಶಕ್ತಿ ತಂದುಕೊಡಲಿದ್ದಾರೆ.
ಇದನ್ನೂ ಓದಿ : ಐಐಟಿ ಉದ್ಘಾಟನೆಗೆ ಆಗಮಿಸುತ್ತಿರುವ ಮೋದಿಗೆ ಕಪ್ಪುಪಟ್ಟಿ ಪ್ರದರ್ಶಿಸಲು ಕಾಂಗ್ರೆಸ್ ಸಜ್ಜು