ಬೆಂಗಳೂರು: ಮಾರ್ಚ್ 25ರಂದು ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿಯ ಬೃಹತ್ ಶಕ್ತಿ ಪ್ರದರ್ಶನ ಕಾರ್ಯಕ್ರಮವಾದ ಮಹಾಸಂಗಮ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಈ ಬಾರಿ ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ರೈಡ್ ಮಾಡಲಿದ್ದು, ತಾವೇ ಉದ್ಘಾಟನೆ ಮಾಡಿದ ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇ ನಿಂದ ಮತ್ತೊಮ್ಮೆ ಪ್ರಯಾಣಿಸಲಿದ್ದಾರೆ.
ಮೂರು ಜಿಲ್ಲೆಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಯುಗಾದಿ ಮುಗಿಯುತ್ತಿದ್ದಂತೆ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮಾರ್ಚ್ 25ರಂದು ಬೆಳಗ್ಗೆ 7.40ಕ್ಕೆ ನವದೆಹಲಿ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಪಡೆ ವಿಮಾನದಲ್ಲಿ ಹೊರಡಲಿರುವ ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 10.10ಕ್ಕೆ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ 10.15ಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಲಿದ್ದು, 10.35ಕ್ಕೆ ಚಿಕ್ಕಬಳ್ಳಾಪುರ ತಲುಪಲಿದ್ದಾರೆ. 10.45 ರಿಂದ 12 ಗಂಟೆವರೆಗೂ ಮದುಸೂಧನ್ ಸಾಯಿ ವೈದ್ಯಕೀಯ ವಿಜ್ಞಾನಗಳ ಸಂಶೋಧನಾ ಸಂಸ್ಥೆಯನ್ನು ಉದ್ಘಾಟನೆ ಮಾಡಲಿದ್ದಾರೆ.
ನಂತರ ಹೆಲಿಕಾಪ್ಟರ್ ಮೂಲಕ 12.40ಕ್ಕೆ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ 1.35 ರವರೆಗೆ ವೈಟ್ಫೀಲ್ಡ್ ಮೆಟ್ರೋ ಮಾರ್ಗ ಉದ್ಘಾಟನೆ ನೆರವೇರಿಸಲಿದ್ದು, ಮೈಟ್ರೋ ರೈಲಿನಲ್ಲಿ ಪ್ರಧಾನಿ ಮೋದಿ ಪ್ರಯಾಣಿಸಲಿದ್ದಾರೆ. ಖುದ್ದು ಮೆಟ್ರೋದಲ್ಲಿ ಸಂಚರಿಸಿ ಪರಿಶೀಲನೆ ನಡೆಸಲಿದ್ದಾರೆ. ನಂತರ ವೈಟ್ಫೀಲ್ಡ್ ಮೆಟ್ರೋ ಸ್ಟೇಷನ್ನಿಂದ ಹೆಲಿಪ್ಯಾಡ್ಗೆ ರಸ್ತೆ ಮಾರ್ಗದ ಮೂಲಕ ತೆರಳಲಿದ್ದು, ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ಪ್ರಯಾಣಿಸಲಿದ್ದಾರೆ.
ಮಧ್ಯಾಹ್ನ 3.15ಕ್ಕೆ ದಾವಣಗೆರೆ ಹೆಲಿಪ್ಯಾಡ್ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ 3.30 ರಿಂದ 5.00 ಗಂಟೆವರೆಗೆ ದಾವಣಗೆರೆಯಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. 10ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶದ ಮೂಲಕ ಬಿಜೆಪಿ ರಾಜ್ಯದಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನಾಡಿನ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನ ನಡೆಯಲಿರುವ ಬಿಜೆಪಿಯ ಬೃಹತ್ ಕಾರ್ಯಕ್ರಮ ಇದು ಎನ್ನಲಾಗುತ್ತಿದೆ.
ಬಿಜೆಪಿಗೆ ಎನರ್ಜಿ ಬೂಸ್ಟ್: ಸಿದ್ದರಾಮೋತ್ಸವ ಕೂಡ ದಾವಣಗೆರೆಯಲ್ಲಿಯೇ ನಡೆದಿದ್ದು ಅದನ್ನು ಮೀರಿಸುವಂತೆ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಮೋದಿ ಮೋಡಿ ಮಾಡುವ ಭಾಷಣ ಮಾಡಿ ರಾಜ್ಯ ಬಿಜೆಪಿಗೆ ಎನರ್ಜಿ ಬೂಸ್ಟ್ ನೀಡಲಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮತ್ತೊಮ್ಮೆ ಮೋದಿ ಪ್ರಯಾಣ: ದಾವಣಗೆರೆ ಕಾರ್ಯಕ್ರಮ ಮುಗಿಸಿ ನವದೆಹಲಿಗೆ ವಾಪಸ್ಸಾಗಲಿರುವ ಪ್ರಧಾನಿ ಮೋದಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಅವಕಾಶವಿದ್ದರೂ ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಲು ನಿರ್ಧರಿಸಿದ್ದಾರೆ ಹಾಗಾಗಿಯೇ ದಾವಣಗೆರೆ ಕಾರ್ಯಕ್ರಮ ಮುಗಿಸಿ ಹೆಲಿಕ್ಯಾಪ್ಟರ್ ಮೂಲಕ ಶಿವಮೊಗ್ಗಕ್ಕೆ ತೆರಳಲಿರುವ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸಂಜೆ 5.55ಕ್ಕೆ ಹೊರಟು ರಾತ್ರಿ 8.25ಕ್ಕೆ ದೆಹಲಿ ವಿಮಾನ ನಿಲ್ದಾಣ ತಲುಪಲಿದ್ದಾರೆ. ಫೆಬ್ರವರಿ 27 ರಂದು ತಾವೇ ಖುದ್ದು ವಿಮಾನ ನಿಲ್ದಾಣಕ್ಕೆ ಬಂದಿಳಿದು ವಿಮಾನ ನಿಲ್ದಾಣ ಉದ್ಘಾಟಿಸಿ ಇದೀಗ ಅದೇ ರನ್ ವೇ ಬಳಸಿಕೊಂಡು ಎರಡನೇ ಪ್ರಯಾಣ ಮಾಡಲು ನಿರ್ಧರಿಸಿದ್ದಾರೆ.
ರೋಡ್ ಶೋ: ಇನ್ನು ಪ್ರಧಾನಿ ಮೋದಿ ಅವರ ರೋಡ್ ಶೋ ಆಯೋಜನೆಗೆ ರಾಜ್ಯ ಬಿಜೆಪಿ ಚಿಂತನೆ ನಡೆಸಿದೆ. ಬೆಂಗಳೂರಿನಲ್ಲಿ ಒಂದು ರೋಡ್ ಶೋ ಮತ್ತು ದಾವಣಗೆರೆಯಲ್ಲಿ ಒಂದು ರೋಡ್ ಶೋಗೆ ಚಿಂತನೆ ನಡೆಸಲಾಗಿದೆ. ಈ ಕುರಿತು ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಿರುವ ರಾಜ್ಯ ಘಟಕಕ್ಕೆ ಸೆಕ್ಯುರಿಟಿ ಕ್ಲಿಯರೆನ್ಸ್ ಆಧಾರದ ಮೇಲೆ ರೋಡ್ ಶೋ ಕುರಿತ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ವಿಧಾನಸಭೆ ಚುನಾವಣೆ 2023.. ಆಮ್ ಆದ್ಮಿ ಪಾರ್ಟಿಯ ಬೆಸ್ಟ್ ಲಿಸ್ಟ್ ಬಿಡುಗಡೆ, ಇಲ್ಲಿದೆ ಅಭ್ಯರ್ಥಿಗಳ ಮಾಹಿತಿ