ಬೆಂಗಳೂರು: ರಾಜ್ಯದಲ್ಲಿ ರೈತರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಕಾರಣವೆಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ನರೇಂದ್ರ ಮೋದಿಯವರೇ, ರೈತನ ಆತ್ಮಹತ್ಯೆಗೆ ಕಾರಣ ನೀವು ನೆರೆಗೆ ಸ್ಪಂದಿಸದೆ ಪರಿಹಾರ ನೀಡದಿರುವುದು. ಈ ಸಾವಿನ ಹೊಣೆಗಾರಿಕೆಯನ್ನು ಹೊರುವಿರೇನು? ಎಂದು ನೇರವಾಗಿ ಪ್ರಶ್ನಿಸಿದೆ. ಜೊತೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ನಿಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿದ್ದೀರಿ, ಅಧಿಕಾರದಲ್ಲಿ ಮುಂದುವರೆಯಲು ನಿಮಗೆ ನೈತಿಕತೆ ಇಲ್ಲ, ತಂತಿಯ ಮೇಲಿಂದ ಕೆಳಗಿಳಿದು ಮನೆಗೆ ನಡೆಯಿರಿ ಎಂದು ವ್ಯಂಗ್ಯವಾಡಿದೆ.

ನಿರಂತರವಾದ ನೆರೆ ಹಾಗೂ ಪ್ರವಾಹದ ಪರಿಸ್ಥಿತಿಯಿಂದ ಜನ ಆಹಾರದ ಸಮಸ್ಯೆ ಎದುರಿಸುತ್ತಿದ್ದಾರೆ. ಜೊತೆಗೆ 80ಕ್ಕೂ ಹೆಚ್ಚು ಜನರ ಸಾವು ಸಂಭವಿಸಿದೆ. ನಿಂತ ನೀರಿನಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ. ಕೇಂದ್ರದಿಂದ ನಯಾಪೈಸೆ ಪರಿಹಾರ ಧನ ಬಂದಿಲ್ಲ. ಇದರಿಂದ ರಾಜ್ಯದಲ್ಲಿ ಪರಿಸ್ಥಿತಿ ನಿಭಾಯಿಸುವುದು ಕಷ್ಟ ಸಾಧ್ಯವಾಗಿದೆ. ಮುಖ್ಯಮಂತ್ರಿ ಜನರಿಗೆ ಬಿಗಿ ಹಗ್ಗದ ಮೇಲೆ ನಡೆಯುವ ಪರಿಸ್ಥಿತಿ ನಿರ್ಮಿಸಿದ್ದಾರೆಂದು ಮೋದಿ ವಿರುದ್ಧ ಟೀಕಾ ಪ್ರಹಾರವನ್ನು ಕಾಂಗ್ರೆಸ್ ನಡೆಸಿದೆ.