ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದು, ನಾಳೆ ಸಂಜೆ 6 ಗಂಟೆಗೆ ರಾಜ್ಯ ರಾಜಧಾನಿಯಲ್ಲಿ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಅಮಿತ್ ಶಾ ಸೆಕ್ಯೂರಿಟಿ ವೈಫಲ್ಯದಿಂದ ಎಚ್ಚೆತ್ತ ಖಾಕಿ ಪಡೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದೆ.
ರಾಜ್ಯ ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದೆ. ಕೇಂದ್ರದ ಘಟಾನುಘಟಿ ನಾಯಕರೇ ಮತಬೇಟೆಗೆ ಇಳಿದಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಪರ ಭರ್ಜರಿ ಕ್ಯಾಂಪೇನ್ ನಡೆಸುತ್ತಿದ್ದಾರೆ. ನಾಳೆ ಬಿಜೆಪಿ ಅಭ್ಯರ್ಥಿ ಪರ ಪ್ರಧಾನಿ ಮೋದಿ ಸಿಲಿಕಾನ್ ಸಿಟಿಯಲ್ಲಿ ಬೃಹತ್ ರೋಡ್ ಶೋ ಹಮ್ಮಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಜೆ 6 ರಿಂದ 6.30 ರವರೆಗೆ ನೈಸ್ ರೋಡ್ ಜಂಕ್ಷನ್ನಿಂದ ಸುಮನಹಳ್ಳಿ ಜಂಕ್ಷನ್ವರೆಗೆ ರೋಡ್ ಶೋ ನಡೆಸಲಿದ್ದು, ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಹೆಜ್ಜೆ ಹೆಜ್ಜೆಗೂ ಪೊಲೀಸರಿಂದ ತಪಾಸಣೆ: ಭದ್ರತೆಗೆ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 3 ಸಾವಿರಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಅಲ್ಲದೇ ಅಕ್ಕಪಕ್ಕದ ಮನೆಯವರಿಗೆ ಮತ್ತು ಅಂಗಡಿ ಮಾಲೀಕರಿಗೆ ನೋಟಿಸ್ ಕೂಡ ನೀಡಿದ್ದಾರೆ. ರ್‍ಯಾಲಿಯ 5. 5 ಕಿ. ಮೀ ವ್ಯಾಪ್ತಿಯಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರು ತಪಾಸಣೆ ನಡೆಸಲಿದ್ದಾರೆ. 5 ಕಿ. ಮೀ ವ್ಯಾಪ್ತಿಯ ಪ್ರತಿ ಮನೆ ಮನೆಗೂ, ಅಂಗಡಿ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಲಿದ್ದಾರೆ.
ಮನೆ ಬಾಡಿಗೆಗೆ ಬಂದವರ ಬಗ್ಗೆಯೂ ಮಾಹಿತಿ ಕಲೆ: ರ್‍ಯಾಲಿ ದಿನ ಯಾರನ್ನೂ ಕೂಡ ಕಟ್ಟಡಗಳ ಮೇಲೆ ನಿಲ್ಲಲು ಬಿಡದಂತೆ ಸೂಚನೆ ನೀಡಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಎಲ್ಲ ಕಟ್ಟಡಗಳ ಮೇಲೂ ಓರ್ವ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಟ್ಟಡದ ಮೇಲೆ ಯಾವುದೇ ರೀತಿ ವಸ್ತುಗಳಿದ್ದರೂ ಅದನ್ನ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಇತ್ತೀಚಿಗೆ ಮನೆ ಬಾಡಿಗೆಗೆ ಬಂದಿದ್ದರೆ ಅವರ ಬಗ್ಗೆಯೂ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಯಾವಾಗ ಬಾಡಿಗೆ ಬಂದಿದ್ದಾರೆ, ಎಲ್ಲಿಂದ ಬಂದಿದ್ದಾರೆ, ಯಾವ ಉದ್ದೇಶ, ಇವೆಲ್ಲದರ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ.
ಡ್ರೋನ್ ಕ್ಯಾಮೆರಾ ಹಾರಾಟಕ್ಕೆ ಇಲ್ಲ ಅವಕಾಶ : ಇನ್ನು ರಸ್ತೆಯ ಎರಡು ಬದಿಗಳಲ್ಲೂ ಬ್ಯಾರಿಕೇಡ್ ಅಳವಡಿಸಿ ಭದ್ರತೆ ಒದಗಿಸಲಾಗಿದ್ದು, ರ್‍ಯಾಲಿ ಮಾರ್ಗಕ್ಕೆ ಯಾರೂ ಎಂಟ್ರಿಯಾಗದಂತೆ ಬಿಗಿ ಭದ್ರತೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರ್‍ಯಾಲಿ ಮಾರ್ಗದ ಸುತ್ತಮುತ್ತ ಸಿಸಿಟಿವಿ ಕಣ್ಗಾವಲು ಕೂಡ ಇರಲಿದೆ. ರೋಡ್ ಶೋ ವೇಳೆ ಯಾವುದೇ ಡ್ರೋನ್ ಕ್ಯಾಮೆರಾ ಹಾರಾಟಕ್ಕೆ ಅವಕಾಶ ಇಲ್ಲ.
ಅನುಮಾನಸ್ಪದವಾಗಿ ಕಂಡರೆ ಪೊಲೀಸರಿಗೆ ಮಾಹಿತಿ: ಇದರ ಜೊತೆಗೆ ರಸ್ತೆ ಅಕ್ಕಪಕ್ಕ ಇರುವ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಹೆಸರು, ವಿಳಾಸ, ಮೊಬೈಲ್ ನಂಬರ್ ಒದಗಿಸುವಂತೆ ಸೂಚನೆ ಕೊಡಲಾಗಿದ್ದು, ವಿವರ ಪಡೆದುಕೊಳ್ಳಲಾಗಿದೆ. ಕಟ್ಟಡಗಳಲ್ಲಿ ಕೆಲಸ ನಿರ್ವಹಿಸುವ ಸೆಕ್ಯೂರಿಟಿ ಗಾರ್ಡ್ ಅಲರ್ಟ್ ಆಗಿರಬೇಕು ಎಂದು ಸೂಚನೆ ಕೊಡಲಾಗಿದೆ.
ಇದನ್ನೂ ಓದಿ: ಸೋನಿಯಾ 'ವಿಷಕನ್ಯೆ' ಎಂದ ಯತ್ನಾಳರನ್ನು ಪಕ್ಷದಿಂದ ವಜಾ ಮಾಡಿ, ಪಿಎಂ, ಸಿಎಂ ಕ್ಷಮೆಯಾಚಿಸಬೇಕು: ಡಿಕೆಶಿ ಆಗ್ರಹ