ಬೆಂಗಳೂರು : ಇದೇ ಮೊದಲ ಬಾರಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ನೇತೃತ್ವದ ವಿಭಾಗೀಯ ಪೀಠದಲ್ಲಿ ಭಾನುವಾರ ಸಹ ಕಲಾಪ ನಡೆಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಮೇಲ್ಮನವಿಯ ವಿಶೇಷ ವಿಚಾರಣೆ ನಡೆಸಿ ಅರ್ಜಿಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿಕೆ ಮಾಡಿತು.
ರಾಜ್ಯದ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಪ್ರಕಟಿಸಿದ್ದ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ, ಚಿಕ್ಕಬಳ್ಳಾಪುರದ ನರೇಂದ್ರ ಬಾಬು ಜಿ ವಿ ಮತ್ತು ಇತರರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು. ಭಾನುವಾರ ಆದರೂ ವಿಶೇಷ ಕಲಾಪ ನಡೆಸಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತು.
ವಾದ ಮಂಡನೆ ವೇಳೆ ಸೇವಾ ವಿವಾದಗಳಿಗೆ ಸಂಬಂಧಿಸಿದ ಪೀಠದಲ್ಲಿ ವಿಚಾರಣೆಯಾಗಿಲ್ಲ. ಹೀಗಾಗಿ ಏಕಸದಸ್ಯ ಪೀಠದ ಆದೇಶ ರದ್ದುಪಡಿಸಲು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿದ್ದ ನ್ಯಾಯಾಲಯವು ಅಭ್ಯರ್ಥಿಗಳ ತಂದೆಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಪರಿಗಣಿಸಿ, ಹೊಸದಾಗಿ ತಾತ್ಕಾಲಿಕ ಪಟ್ಟಿ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ನಿರ್ದೇಶಿಸಿ, ಜನವರಿ 1ರಂದು ಆದೇಶಿಸಿದ್ದು ಮತ್ತು ಇದನ್ನು ಸರ್ಕಾರ ಪ್ರಶ್ನಿಸಿದ್ದರ ಕುರಿತು ಸುದೀರ್ಘ ವಾದ ಮಂಡನೆಯಾಯಿತು. ವಿಸ್ತೃತವಾದ ವಾದ ಮಂಡನೆ ಬಳಿಕ ಸಿಜೆ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿಕೆ ಮಾಡಿತು.
ಇದನ್ನೂ ಓದಿ: ಟೆಂಡರ್ ಬಿಡ್ ತೆರೆಯುವ ಮುನ್ನ ಬದಲಾವಣೆ ಮಾಡಬಹುದು: ಹೈಕೋರ್ಟ್
ಹಿನ್ನೆಲೆ : ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಗೊಳಿಸಿ ಹೊಸ ಆಯ್ಕೆ ಪಟ್ಟಿ ಬಿಡುಗಡೆ ಮಾಡುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿತ್ತು. ಅಲ್ಲದೆ, ಪತಿಯ ಆದಾಯದ ಬದಲು ಅಭ್ಯರ್ಥಿ ತಂದೆಯ ಜಾತಿ, ಆದಾಯ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಅದರಂತೆ, ರಜಾ ದಿನವಾದ ಭಾನುವಾರದಂದೂ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಶೇಷ ಕಲಾಪ ನಡೆಯಿತು. ಇದು ಅಪರೂಪದ ಪ್ರಕರಣ ಎನ್ನಲಾಗಿದೆ. ಬೇಸಿಗೆ ರಜೆ, ದಸರಾ ರಜೆಯಂತಹ ವೇಳೆ ರಜಾ ಕಾಲದ ಪೀಠಗಳು ಕಾರ್ಯನಿರ್ವಹಿಸಿ ತುರ್ತು ಅರ್ಜಿಗಳ ವಿಚಾರಣೆ ನಡೆಸಲಿದೆ. ಜೊತೆಗೆ ಪ್ರಮುಖ ಮತ್ತು ತ್ವರಿತ ಎನ್ನುವಂತಾದಲ್ಲಿ ರಾತ್ರಿಯೂ ವಿಚಾರಣೆ ನಡೆಸಿದ ಉದಾಹರಣೆಗಳು ಇವೆ. ಆದರೆ ಭಾನುವಾರ ಕಲಾಪ ನಡೆಸಿದ್ದು, ಇದೇ ಮೊದಲು ಎನ್ನಲಾಗ್ತಿದೆ.
ಇದನ್ನೂ ಓದಿ: ಮಕ್ಕಳ ಸಮವಸ್ತ್ರ: ಆಕ್ಷೇಪಣೆ ಸಲ್ಲಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೊರ್ಟ್ ಸೂಚನೆ