ಬೆಂಗಳೂರು: ಕೊಟ್ಟ ಸಾಲವನ್ನು ಹಿಂದಿರುಗಿಸುವಂತೆ ಒತ್ತಾಯಪಡಿಸುವುದು ಅಥವಾ ಬಲವಂತಪಡಿಸುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸಾಲ ಹಿಂದಿರುಗಿಸುವಂತೆ ಕೋರಿ ಒತ್ತಡ ಹೇರಿದ ಪರಿಣಾಮ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಏಳು ವರ್ಷ ಶಿಕ್ಷೆಗೆ ಗುರಿಯಾಗಿದ್ದ ಮಂಗಳ ಗೌರಿ ತನಗೆ ವಿಧಿಸಿದ್ದ ಶಿಕ್ಷೆ ರದ್ದು ಪಡಿಸುವಂತೆ ಕೋರಿ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಪ್ರಕರಣದಲ್ಲಿ ಮೃತ ಪಟ್ಟಿರುವ ರಾಜುಗೆ ಆತ್ಮಹತ್ಯೆ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದಲೇ ಅರ್ಜಿದಾರರಾದ ಮಂಗಳ ಗೌರಿ ಪ್ರಚೋದನೆ ನೀಡಿದರೆಂಬುದನ್ನು ಸಾಬೀತುಪಡಿಸಲು ಯಾವುದೇ ಅಂಶಗಳಿಲ್ಲ. ಜೊತೆಗೆ ಯಾವುದೇ ಆಯಾಮದಿಂದ ನೋಡಿದರೂ ಸಹ ಆರೋಪಿ ಸಾಲಮರುಪಾವತಿ ಮಾಡದಿದ್ದರೆ ಜೀವ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿರುವುದು ಪ್ರಚೋದನೆ ನೀಡಿದಂತಾಗದು ಎಂದು ನ್ಯಾಯಪೀಠ ತಿಳಿಸಿದೆ.
ಜೊತೆಗೆ, ಅರ್ಜಿದಾರರಿಂದ ರಾಜು ಸಾಲ ಪಡೆದಿದ್ದರು. ಅವರು ಮರುಪಾವತಿ ಮಡುವಂತೆ ಕೇಳಿದ್ದರು. ಆದರೆ, ಅದೇ ಉದ್ದೇಶದಿಂದ ಕಿರುಕುಳ ನೀಡಿದ್ದಾರೆ ಎಂಬುದಕ್ಕೆ ಸಾಕ್ಷಿ ಇಲ್ಲ. ಅರ್ಜಿದಾರರಿಗೆ ಮರು ಪಾವತಿ ಬೇಕಿತ್ತೇ ವಿನಾ ಅದಕ್ಕಾಗಿ ರಾಜು ಪ್ರಾಣ ಬೇಕಾಗಿರಲಿಲ್ಲ. ಹಾಗಾಗಿ ಅವರು ಉದ್ದೇಶಪೂರ್ವಕವಾಗಿಯೇ ಪ್ರಚೋದನೆ ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಅಂಶಗಳಿಲ್ಲದ ಕಾರಣ ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶಿಸಿದೆ.
ಅರ್ಜಿದಾರರ ವಿರುದ್ಧ ಸಾಂದರ್ಭಿಕ ಸಾಕ್ಷ್ಯಗಳೂ ಇಲ್ಲ. ಆದರೂ ಅಧೀನ ನ್ಯಾಯಾಲಯ ಪ್ರಾಸಿಕ್ಯೂಷನ್ ಮೇಲೆ ಸಾಕ್ಷ್ಯವನ್ನು ನೀಡುವ ಹೊಣೆ ವಹಿಸದಿರುವುದು ಸರಿಯಲ್ಲ ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ ಏನು?: ಬೆಂಗಳೂರಿನ ಬನ್ನೇರುಘಟ್ಟದ ನಿವಾಸಿ ರಾಜು ಎಂಬುವರು ಅರ್ಜಿದಾರ ಮಂಗಳ ಗೌರಿ ಅವರಿಂದ ಹಣ ಪಡೆದುಕೊಂಡಿದ್ದರು. ಮೃತ ರಾಜು ಕವಿತಾ ಎಂಬುವರನ್ನು ಮದುವೆಯಾಗಿ ಒಂದು ಮಗುವಿತ್ತು. ಆ ಹಣ ಮರುಪಾವತಿಗಾಗಿ ಅರ್ಜಿದಾರರು ಮೃತನಿಗೆ ಒತ್ತಡ ನೀಡುತ್ತಿದ್ದರು, ಅದೇ ಕಾರಣಕ್ಕೆ ರಾಜು 2019ರ ಏ.25ರಂದು ಪತ್ನಿ ಮತ್ತು ಮಗುವನ್ನು ಮೈಸೂರಿನ ಸಂಬಂಧಿಕರ ಮನೆಗೆ ಕಳುಹಿಸಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಆತ ಚಿಕಿತ್ಸೆ ಫಲಕಾರಿಯಾಗದೇ 2019ರ ಮೇ 10ರಂದು ಕೊನೆಯುಸಿರೆಳೆದಿದ್ದರು.
ಪ್ರಕರಣದಲ್ಲಿ ದೂರು ಆಧರಿಸಿ ಪೊಲೀಸರು ಅರ್ಜಿದಾರರಾದ ಮಂಗಳ ಗೌರಿಯನ್ನು ಬಂಧಿಸಿ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಸೆಕ್ಷನ್ 306 ಕೊಲೆಯತ್ನ ಆರೋಪದಲ್ಲಿ ವಿಚಾರಣಾ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡವನ್ನು ವಿಧಿಸಿತ್ತು. ಆ ಆದೇಶ ರದ್ದು ಕೋರಿ ಅರ್ಜಿದಾರರಾದ ಮಂಗಳ ಗೌರಿ ಹೈಕೋರ್ಟ್ ಮೆಟ್ಟಿಲೇರಿದ್ದರು.