ಬೆಂಗಳೂರು: "ಈ ಬಾರಿ ಬಜೆಟ್ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆ ನಿರೀಕ್ಷೆಗಳು ಈಡೇರಿಲ್ಲ" ಎಂದು ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದರು. "ಪೆಟ್ರೋಲ್ ಮತ್ತು ಡೀಸೆಲ್ಗೆ ಹೆಚ್ಚಿನ ತೆರಿಗೆ ವಿನಾಯಿತಿ ಕೊಡಬೇಕಿತ್ತು, ಕೊಡಲಿಲ್ಲ. ಒನ್ ನೇಷನ್ ಆಲ್ ಸ್ಟೇಟ್ ಸಿಂಗಲ್ ಲೈಸನ್ಸ್ ಫೀ ಮಾಡಬೇಕೆಂದು ಮನವಿ ಮಾಡಿದ್ದೆವು ಅದನ್ನೂ ಮಾಡಲಿಲ್ಲ. ರಾಜ್ಯದಲ್ಲಿ ವಿವಿಧ ಲೈಸನ್ಸ್ ಮುಂದುರಿಸಲಾಗಿದೆ. 7 ಲಕ್ಷದವರೆಗೆ ವೈಯಕ್ತಿಕ ತೆರಿಗೆ ವಿನಾಯಿತಿ ಮಾಡಿರುವುದು ಆಶಾದಾಯಕವಾಗಿದೆ. ಕೈಗಾರಿಕೆಗಳಿಗೆ ಒತ್ತು ಕೊಟ್ಟಿದ್ದಾರೆ" ಎಂದರು.
ಅನುಕೂಲಕರ ಬಜೆಟ್: "ಈ ಬಾರಿಯದು ಅನುಕೂಲಕರ ಬಜೆಟ್. ಎಲ್ಲಾ ಕ್ಷೇತ್ರಗಳನ್ನೂ ಕವರ್ ಮಾಡಿದ್ದಾರೆ" ಎಂದು ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ರಾಜ್ಯಾಧ್ಯಕ್ಷ ಎಸ್.ನಂಜುಂಡ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು. "ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಹಣ ನಿಗದಿ ಮಾಡಿರುವುದು ಸ್ವಾಗತ. ತೆರಿಗೆ ವಿನಾಯಿತಿ ನೀಡಲಾಗಿದೆ. ಲೆಕ್ಕ ಪರಿಶೋಧನೆ ಹಾಗೂ ಲೆಕ್ಕಾಪರಿಶೋಧನೇತರ ಕ್ಷೇತ್ರಗಳಿಗೆ ಹೆಚ್ಚು ಅನುಕೂಲ ಕಲ್ಪಿಸಲಾಗಿದೆ. ಸಾಮಾನ್ಯ ವರ್ಗದವರಿಗೆ ಹೊರೆ ಇಲ್ಲದ ಬಜೆಟ್ ಆಗಿದೆ. ವಿಶ್ವಕರ್ಮ ಯೋಜನೆ ಘೋಷಿಸಿದ್ದು ಸ್ವಾಗತಾರ್ಹ" ಎಂದು ತಿಳಿಸಿದರು.
ಲಿಥಿಯಮ್ ಬ್ಯಾಟರಿ ಆಮದು ತೆರಿಗೆ ಇಳಿಕೆ ಸ್ವಾಗತಾರ್ಹ: "ಲಿಥಿಯಮ್ ಬ್ಯಾಟರಿ ಮೇಲಿನ ಆಮದು ತೆರಿಗೆಯನ್ನು 13% ಇಳಿಸಿ/ಕಡಿತ ಗೊಳಿಸಿರುವುದರಿಂದ ಇಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆ ಆಗಲಿದೆ. ನಮ್ಮ ಬಹಳ ದಿನಗಳ ಬೇಡಿಕೆ ಈಡೇರಿದಂತಾಗಿದೆ" ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಹೇಳಿದರು.
ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಡಾ.ಸಿಐಎಸ್ ಪ್ರಸಾದ್ ಹೇಳಿಕೆ: "ಈ ಬಾರಿಯ ಬಜೆಟ್‌ನಲ್ಲಿ ಯುವಕರಿಗೆ ಅಮೃತಕಾಲ್ ಆರಂಭಿಸಿದ್ದು, ಮೂಲಭೂತ ಸೌಲಭ್ಯಕ್ಕಾಗಿ 10 ಲಕ್ಷ ಕೋಟಿ ಘೋಷಿಸಿದ್ದಾರೆ. ಇದು ಉತ್ತಮ ಬಜೆಟ್" ಎಂದು ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಡಾ.ಸಿಐಎಸ್ ಪ್ರಸಾದ್ ಹೇಳಿದ್ದಾರೆ. "ಈ ಬಜೆಟ್‌ನಲ್ಲಿ ಕೃಷಿಗೆ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಸಿರಿಧಾನ್ಯಕ್ಕೆ ಹೆಚ್ಚು ಪ್ರೋತ್ಸಾಹ ಮಾಡಲಾಗುತ್ತಿದೆ. ಗ್ರೀನ್ ಟೆಕ್ನಾಲಜಿ, ಗ್ರೀನ್ ಟೆನಾಲ್ಗೆ ಒತ್ತು ನೀಡಲಾಗಿದೆ" ಎಂದು ಹೇಳಿದರು.
ಎಫ್ಕೆಸಿಸಿಐ ಹಿರಿಯ ಉಪಾಧ್ಯಕ್ಷ ರಮೇಶ್ ಚಂದ್ರ ಲಹೋಟಿ ಮಾತನಾಡಿ, "ಕೈಗಾರಿಕೆಗಿಂತ ಸ್ಕಿಲ್ ಡೆವಲಪ್ಮೆಂಟ್ಗೆ ಮಹತ್ವ ನೀಡಲಾಗಿದೆ. ಮೂರು ಲಕ್ಷ ಯುವಕರಿಗೆ ತರಬೇತಿ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಬಹಳಷ್ಟು ಹಣ ನಿಗದಿ ಮಾಡಲಾಗಿದೆ. ಹಾಗೆಯೇ ಕೈಗಾರಿಕೆಗೂ ಕ್ರೆಡಿಟ್ ನೀಡಲಾಗಿದೆ. ಅದು ಯಾವ ರೀತಿ ತಲುಪಲಿದೆ ಎಂಬುದು ನೋಡಬೇಕು. ಈ ಬಾರಿ ಬಜೆಟ್‌ನಲ್ಲಿ ಹೆಚ್ಚು ಗ್ರೀನ್ ಎನರ್ಜಿ ಕಡೆ ಗಮನಹರಿಸಲಾಗಿದೆ. ಎಲ್ಲಾ ಕಡೆ ಮೂಲಭೂತ ಸೌಲಭ್ಯದ ಕಡೆ ಒತ್ತು ಕೊಡಲಾಗಿದೆ" ಎಂದರು.
ಇದನ್ನೂ ಓದಿ: 'ಪ್ರೋಗ್ರೆಸ್ಸಿವ್ ಬಜೆಟ್, 10/7 ಮಾರ್ಕ್ಸ್ ಕೊಡಬಹುದು': ಎಫ್ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ